ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾದ ಬೆನ್ನಲ್ಲೇ ಡಿಎಂಕೆ ನಾಯಕ ಹಾಗೂ ನೂತನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಸನಾತನ ಧರ್ಮ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು ಎಂದು ಅವರು ಪುನರುಚ್ಚರಿಸಿದ್ದು, ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ರಾಜಕೀಯವಾಗಿ ಬೇರೆಬೇರೆ ಆಗಿದ್ದರೂ ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. “ಸದನದಲ್ಲಿ ನಾವು ಪ್ರತ್ಯೇಕವಾಗಿ ಕುಳಿತಿರಬಹುದು. ಆದರೆ ತಮಿಳುನಾಡಿನ ಅಭಿವೃದ್ಧಿಗೆ ಬಂದಾಗ ಎಲ್ಲರೂ ಕೈಜೋಡಿಸಬೇಕು,” ಎಂದು ಅವರು ಹೇಳಿದರು.
ಇದೇ ವೇಳೆ ನೂತನ ಮುಖ್ಯಮಂತ್ರಿ ವಿಜಯ್ ಅವರಿಗೆ ಶುಭಾಶಯ ಕೋರಿದ ಉದಯನಿಧಿ, ರಾಜ್ಯದಲ್ಲಿ ರಾಜಕೀಯ ಸೌಹಾರ್ದತೆ ಮತ್ತು ಪರಸ್ಪರ ಗೌರವದ ಸಂಸ್ಕೃತಿ ಮುಂದುವರಿಯಲಿ ಎಂದು ಆಶಿಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ವಿರೋಧಿಗಳಾಗಿದ್ದರೂ ಜನಹಿತದ ವಿಷಯದಲ್ಲಿ ಒಂದಾಗಿ ಕೆಲಸ ಮಾಡಬೇಕೆಂಬ ಸಂದೇಶವನ್ನು ಅವರು ನೀಡಿದರು.
ಆದರೆ ತಮ್ಮ ಭಾಷಣದಲ್ಲಿ ಉದಯನಿಧಿ ಸ್ಟಾಲಿನ್ ಮತ್ತೆ ಸನಾತನ ಧರ್ಮದ ವಿಷಯವನ್ನು ಪ್ರಸ್ತಾಪಿಸಿ, “ಸಮಾಜದಲ್ಲಿ ಜಾತಿ ಮತ್ತು ಅಸಮಾನತೆಯನ್ನು ಉಳಿಸುವ ಯಾವುದೇ ವ್ಯವಸ್ಥೆ ಮುಂದುವರಿಯಬಾರದು. ಸನಾತನ ಧರ್ಮ ಜನರನ್ನು ಬೇರ್ಪಡಿಸುವ ಚಿಂತನೆಗೆ ಕಾರಣವಾಗಿದೆ,” ಎಂದು ಟೀಕಿಸಿದರು.
ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭದಲ್ಲಿ ನಡೆದ ಶಿಷ್ಟಾಚಾರ ಕುರಿತೂ ಉದಯನಿಧಿ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡಿದ ಬಳಿಕ ತಮಿಳುನಾಡಿನ ನಾಡಗೀತೆ ಹಾಡಿರುವುದನ್ನು ಪ್ರಶ್ನಿಸಿದ ಅವರು, “ರಾಜ್ಯದ ಗೌರವಕ್ಕೆ ಮೊದಲ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ನಾಡಗೀತೆಯನ್ನು ಎರಡನೇ ಸ್ಥಾನಕ್ಕೆ ತಳ್ಳದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು,” ಎಂದು ಸಲಹೆ ನೀಡಿದರು.
