ಮಹಿಳೆಯರಿಗೆ ತಿಂಗಳಿಗೆ ₹2500, ವಧುವಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ: ಟಿವಿಕೆ ಪಕ್ಷದಿಂದ ಪ್ರಣಾಳಿಕೆ ರಿಲೀಸ್!

Untitled design 2026 03 07T212456.592

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವಂತೆ ರಾಜ್ಯದ ರಾಜಕೀಯ  ದಿನದಿಂದ ದಿನಕ್ಕೆ ಕಾವೇರಿಸುತ್ತಿದೆ. ಪ್ರಮುಖ ಪಕ್ಷಗಳಾದ ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಪ್ರಚಾರವನ್ನು ತೀವ್ರಗೊಳಿಸಿರುವ ನಡುವೆ, ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವೂ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರ ಗಮನ ಸೆಳೆದಿದೆ.

ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಹಲವು ಆಕರ್ಷಕ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಮಹಿಳೆಯರಿಗೆ ತಿಂಗಳಿಗೆ ₹2,500

ಪ್ರಣಾಳಿಕೆಯ ಪ್ರಮುಖ ಘೋಷಣೆಯಾಗಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ಆರ್ಥಿಕ ಸಹಾಯ ನೀಡಲಾಗುವುದು ಎಂದು ವಿಜಯ್ ತಿಳಿಸಿದ್ದಾರೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿಗೆ ಸಹಾಯವಾಗುವ ಜೊತೆಗೆ ಮಹಿಳೆಯರ ಸ್ವಾವಲಂಬನೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಮದುವೆಯಾಗುವ ಯುವತಿಯರಿಗೆ ಚಿನ್ನ ಮತ್ತು ಸೀರೆ

ಮದುವೆಯಾಗುವ ಯುವತಿಯರಿಗೆ ಸರ್ಕಾರದಿಂದ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮದುವೆ ಖರ್ಚಿನ ಭಾರ ಕಡಿಮೆಯಾಗಲಿದೆ ಎಂದು ಟಿವಿಕೆ ಪಕ್ಷ ಹೇಳಿದೆ.

ಉಚಿತ ಬಸ್ ಪ್ರಯಾಣ ಮತ್ತು ಸ್ಯಾನಿಟರಿ ಪ್ಯಾಡ್

ಮಹಿಳೆಯರಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿಜಯ್ ತಿಳಿಸಿದ್ದಾರೆ. ಜೊತೆಗೆ ಶಾಲೆಗಳು, ಕಾಲೇಜುಗಳು ಮತ್ತು ರೇಷನ್ ಅಂಗಡಿಗಳ ಮೂಲಕ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡುವ ಯೋಜನೆಯನ್ನೂ ಘೋಷಿಸಿದ್ದಾರೆ.

ಕುಟುಂಬಗಳಿಗೆ LPG ಸಿಲಿಂಡರ್ ಸೌಲಭ್ಯ

ಪ್ರತಿ ಕುಟುಂಬಕ್ಕೂ ವರ್ಷಕ್ಕೆ 6 ಉಚಿತ LPG ಸಿಲಿಂಡರ್ ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದು ಕುಟುಂಬಗಳ ಜೀವನ ವೆಚ್ಚವನ್ನು ಕಡಿಮೆ ಮಾಡುವ ಪ್ರಮುಖ ಕ್ರಮ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಶಿಕ್ಷಣಕ್ಕೆ ವಿಶೇಷ ಯೋಜನೆ

ಮಕ್ಕಳ ಶಿಕ್ಷಣಕ್ಕೂ ವಿಜಯ್ ವಿಶೇಷ ಗಮನ ಹರಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ₹15,000 ಪ್ರೋತ್ಸಾಹಧನ ನೀಡಲಾಗುತ್ತದೆ. ಜೊತೆಗೆ ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತ ಕುಟುಂಬಗಳ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡುವ ಯೋಜನೆಯನ್ನೂ ಘೋಷಿಸಲಾಗಿದೆ.

ಮಹಿಳಾ ಸುರಕ್ಷತೆಗೆ ವಿಶೇಷ ಕ್ರಮ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ ಎಂದು ವಿಜಯ್ ಹೇಳಿದ್ದಾರೆ. ಜೊತೆಗೆ ಕತ್ತಲೆ ಪ್ರದೇಶಗಳನ್ನು ಕಡಿಮೆ ಮಾಡಲು ಸಿಸಿಟಿವಿ ಕ್ಯಾಮೆರಾ ಮತ್ತು ಬೀದಿ ದೀಪಗಳನ್ನು ಹೆಚ್ಚಿಸುವ ಯೋಜನೆಯೂ ಇದೆ.

ಮಹಿಳಾ ಸುರಕ್ಷತೆಗೆ ವಿಶೇಷ ಪಡೆ ರಚಿಸಲಾಗುತ್ತದೆ. ಈ ಪಡೆಯ ಮಹಿಳಾ ಅಧಿಕಾರಿಗಳು ಬಾಡಿ ಕ್ಯಾಮೆರಾಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ 5 ನಿಮಿಷಗಳೊಳಗೆ ಸಹಾಯ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ.

ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು

ಮಹಿಳಾ ಸ್ವಸಹಾಯ ಸಂಘಗಳಿಗೆ ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ನೋಂದಾಯಿತ ಸಣ್ಣ ಉದ್ಯಮಗಳಾಗಿ ರೂಪಾಂತರಗೊಳ್ಳುವ ಸಂಘಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ 100% ಅನುದಾನ ನೀಡುವ ಯೋಜನೆಯನ್ನೂ ಘೋಷಿಸಲಾಗಿದೆ.

‘ತಾಯಿ ಮಾಮನ್’ ಯೋಜನೆ

ರಾಜ್ಯದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಸರ್ಕಾರದಿಂದ ಚಿನ್ನದ ಉಂಗುರ ನೀಡಲಾಗುತ್ತದೆ. ಜೊತೆಗೆ ಮಗುವಿಗೆ ಬೇಕಾದ ಬಟ್ಟೆ, ಸಾಬೂನು, ಆಟಿಕೆಗಳು, ಸೊಳ್ಳೆಪರದೆ ಮತ್ತು ನ್ಯಾಪ್ಕಿನ್ ಒಳಗೊಂಡ ಬೇಬಿ ಕಿಟ್ ನೀಡಲಾಗುತ್ತದೆ. ಈ ಯೋಜನೆಯನ್ನು ‘ತಾಯಿ ಮಾಮನ್’ ಯೋಜನೆ ಎಂದು ಹೆಸರಿಸಲಾಗಿದೆ.

Exit mobile version