“ವಿಜಯ್ ಸರ್ಕಾರಕ್ಕೆ ಕೇವಲ 6 ತಿಂಗಳ ಆಯಸ್ಸು”: ಟಿಟಿವಿ ದಿನಕರನ್ ಸ್ಫೋಟಕ ಭವಿಷ್ಯ!

Untitled design 2026 05 17T180355.163

ತಮಿಳುನಾಡಿನ ರಾಜಕೀಯ ವಲಯದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಆಯಸ್ಸು ಕೇವಲ ಆರು ತಿಂಗಳು ಮಾತ್ರ ಎಂದು ಎಎಮ್‌ಎಂಕೆ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ತಮ್ಮ ಪಕ್ಷದ ಬಂಡಾಯ ಶಾಸಕ ಎಸ್. ಕಾಮರಾಜ್ ಅವರನ್ನು ಮಂತ್ರಿ ಮಾಡಿದರೆ, ಶಾಸಕರ ಖರೀದಿ ಆರೋಪದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎಎಮ್‌ಎಂಕೆ ಪಕ್ಷದಿಂದ ಗೆದ್ದು ಬಂದಿದ್ದ ಮನ್ನಾರ್ಗುಡಿ ಶಾಸಕ ಎಸ್. ಕಾಮರಾಜ್ ಇತ್ತೀಚೆಗೆ ವಿಶ್ವಾಸಮತ ಯಾಚನೆ ವೇಳೆ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಈ ನಡೆ ಬಳಿಕ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು. ಆದರೆ ಇದೀಗ ಕಾಮರಾಜ್ ಅವರನ್ನು ಮಂತ್ರಿ ಮಾಡಿದರೆ, ಶಾಸಕರ ಖರೀದಿ ಹಾಗೂ ಕುದುರೆ ವ್ಯಾಪಾರದ ಆರೋಪದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ದಿನಕರನ್ ಎಚ್ಚರಿಕೆ ನೀಡಿದ್ದಾರೆ.

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಅಧಿಕಾರಕ್ಕೆ ಬಂದಿದ್ದರೂ, ಸ್ಪಷ್ಟ ಬಹುಮತದ ಕೊರತೆಯನ್ನು ಎದುರಿಸುತ್ತಿದೆ. ಇತ್ತೀಚಿನ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದರೂ, ಸರ್ಕಾರ ರಚಿಸಲು ಅಗತ್ಯವಿದ್ದ ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿತ್ತು. ಈ ಹಿನ್ನೆಲೆ ಸಣ್ಣ ಪಕ್ಷಗಳು ಹಾಗೂ ಕೆಲವು ಬಂಡಾಯ ಶಾಸಕರ ಬೆಂಬಲದ ಮೂಲಕ ಸರ್ಕಾರ ಬಹುಮತದ ಗಡಿಯನ್ನು ದಾಟಿತ್ತು.

ಈ ವಿಚಾರವನ್ನೇ ಉಲ್ಲೇಖಿಸಿದ ದಿನಕರನ್, ಟಿವಿಕೆ ಸರ್ಕಾರ ಶಾಸಕರನ್ನು ಸೆಳೆಯಲು ಕುದುರೆ ವ್ಯಾಪಾರ ನಡೆಸಿದೆ ಎಂದು ಆರೋಪಿಸಿದ್ದಾರೆ. ನಮ್ಮ ಶಾಸಕ ಎಸ್. ಕಾಮರಾಜ್ ಅವರನ್ನು ಸೆಳೆಯಲು ಟಿವಿಕೆ ನಾಯಕರು ನಕಲಿ ಪತ್ರ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ವಿಡಿಯೋಗಳನ್ನು ಉಪಯೋಗಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

“ಯಾವ ರೀತಿಯ ಆಮಿಷ ಒಡ್ಡಲಾಗಿದೆ, ಯಾವ ಮಾತುಕತೆ ನಡೆದಿದೆ ಎಂಬ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ಇದು ರಾಜಕೀಯ ಕುದುರೆ ವ್ಯಾಪಾರವಲ್ಲದೆ ಇನ್ನೇನು?” ಎಂದು ದಿನಕರನ್ ಪ್ರಶ್ನಿಸಿದ್ದಾರೆ.

ಇದೇ ವೇಳೆ ವಿಜಯ್ ಸರ್ಕಾರದ ಸ್ಥಿರತೆ ಕುರಿತು ದಿನಕರನ್ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿರುವ ಕಾರಣ, ವಿಸಿಕೆ (VCK) ಹಾಗೂ ಎಡಪಕ್ಷಗಳು ಹೆಚ್ಚು ದಿನ ಸರ್ಕಾರಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ತಲಾ ಎರಡು ಹಾಗೂ ನಾಲ್ಕು ಶಾಸಕರನ್ನು ಹೊಂದಿರುವ ಈ ಪಕ್ಷಗಳು ಆರು ತಿಂಗಳೊಳಗೆ ತಮ್ಮ ನಿಲುವು ಬದಲಾಯಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಾಸಮತ ಪರೀಕ್ಷೆಯಲ್ಲಿ ಜಯ ಸಾಧಿಸಿರುವ ಟಿವಿಕೆ ಸರ್ಕಾರ ಕನಿಷ್ಠ ನವೆಂಬರ್ ವರೆಗೆ ಉಳಿಯಬಹುದು. ಆದರೆ ಆ ನಂತರ ಸರ್ಕಾರದ ಭವಿಷ್ಯ ಅನುಮಾನಾಸ್ಪದವಾಗಲಿದೆ ಎಂದು ದಿನಕರನ್ ಭವಿಷ್ಯ ನುಡಿದಿದ್ದಾರೆ. ಡಿಎಂಕೆ ಪಕ್ಷವೂ ತಕ್ಷಣ ಸರ್ಕಾರ ಅಸ್ಥಿರಗೊಳಿಸಲು ಮುಂದಾಗುವುದಿಲ್ಲ, ಆದರೆ ರಾಜಕೀಯ ಬೆಳವಣಿಗೆಗಳು ಯಾವ ಕ್ಷಣದಲ್ಲಾದರೂ ಬದಲಾಗಬಹುದು ಎಂದು ಹೇಳಿದ್ದಾರೆ.

ಇನ್ನೊಂದೆಡೆ ಅಣ್ಣಾಡಿಎಂಕೆ  (AIADMK) ಪಕ್ಷದ ಒಳಬಿಕ್ಕಟ್ಟಿನ ಕುರಿತು ದಿನಕರನ್ ಮಾತನಾಡಿದ್ದಾರೆ. ಪಕ್ಷಾಂತರ ವಿರೋಧಿ ಕಾಯ್ದೆಯಿಂದ ಪಾರಾಗಲು ಬಂಡಾಯ ಶಾಸಕರ ಬಳಿ ಅಗತ್ಯ ಸಂಖ್ಯಾಬಲವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಅಣ್ಣಾಡಿಎಂಕೆ ಪಕ್ಷದಲ್ಲಿ 47 ಶಾಸಕರಿದ್ದು, ಸಿ.ವಿ. ಷಣ್ಮುಗಂ ಹಾಗೂ ಎಸ್.ಪಿ. ವೇಲುಮಣಿ ನೇತೃತ್ವದ ಬಂಡಾಯ ಬಣಕ್ಕೆ ಸುಮಾರು 25 ಶಾಸಕರ ಬೆಂಬಲವಿದೆ. ಆದರೆ ಅನರ್ಹತೆಯಿಂದ ಪಾರಾಗಲು ಕನಿಷ್ಠ 32 ಶಾಸಕರ ಬೆಂಬಲ ಅಗತ್ಯವಿದೆ ಎಂದು ದಿನಕರನ್ ಹೇಳಿದ್ದಾರೆ.

“ಅಮ್ಮ (ಜಯಲಲಿತಾ) ಅವರ ಆಡಳಿತವನ್ನು ಮರುಸ್ಥಾಪಿಸುವ ಹೆಸರಿನಲ್ಲಿ ಟಿವಿಕೆ ಸರ್ಕಾರವನ್ನು ಬೆಂಬಲಿಸುತ್ತಿರುವವರು ಮುಂದೆ ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ದಿನಕರನ್ ಎಚ್ಚರಿಕೆ ನೀಡಿದ್ದಾರೆ.

Exit mobile version