“ಪರಮಾಣು ಒಪ್ಪಂದ ಆಗುವವರೆಗೆ ಇರಾನ್ ಮೇಲೆ ದಿಗ್ಭಂಧನ ಮುಂದುವರಿಯುತ್ತದೆ”: ಟ್ರಂಪ್ ಎಚ್ಚರಿಕೆ

Untitled design 2026 04 30T115732.683

ವಾಷಿಂಗ್ಟನ್/ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ ಇತ್ತೀಚೆಗೆ ಸಂಧಾನಕ್ಕೆ ಮುಂದಾಗಿದ್ದ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕೈಬಿಡುವವರೆಗೂ ಹಾರ್ಮುಜ್ ಜಲಸಂಧಿಯ ಮೇಲಿನ ನೌಕಾ ದಿಗ್ಬಂಧನವನ್ನು ತೆಗೆದುಹಾಕುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

“ದಿಗ್ಬಂಧನವೇ ಪರಿಣಾಮಕಾರಿ ಅಸ್ತ್ರ”
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮೇಲೆ ನೇರ ಬಾಂಬ್ ದಾಳಿ ನಡೆಸುವುದಕ್ಕಿಂತ ಈ ಆರ್ಥಿಕ ದಿಗ್ಬಂಧನವೇ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ. “ಇರಾನ್ ಈಗಾಗಲೇ ಉಸಿರುಗಟ್ಟಿದಂತಹ ಸ್ಥಿತಿಯಲ್ಲಿದೆ. ದಿನ ಕಳೆದಂತೆ ಅವರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಅವರು ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಹೊಂದುವುದನ್ನು ನಾವು ಸಹಿಸುವುದಿಲ್ಲ. ಇದು ನಮ್ಮ ಅಂತಿಮ ಎಚ್ಚರಿಕೆ” ಎಂದು ಅವರು ಕಟುವಾಗಿ ಹೇಳಿದ್ದಾರೆ.

ಇರಾನ್ ತನ್ನ ತೈಲ ರಫ್ತು ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಅಲ್ಲಿನ ತೈಲ ಸಂಗ್ರಹಗಾರಗಳು ಮತ್ತು ಪೈಪ್ಲೈನ್ ಗಳು ಅತಿಯಾದ ಒತ್ತಡದಿಂದ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿವೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ. 

ಇರಾನ್ ಕಡೆಯಿಂದ ಏನಿದೆ ಪ್ರತಿಕ್ರಿಯೆ?
ಇನ್ನೊಂದೆಡೆ, ಇರಾನ್ ಕೂಡ ಸುಮ್ಮನೆ ಕುಳಿತಿಲ್ಲ. ಅಮೆರಿಕದ ಈ ನಡೆಯನ್ನು ಕೇವಲ ಆರ್ಥಿಕ ಒತ್ತಡವಲ್ಲ, ಬದಲಾಗಿ ಇರಾನ್ ಅನ್ನು ಒಳಗಿನಿಂದಲೇ ಅಸ್ಥಿರಗೊಳಿಸುವ ದೊಡ್ಡ ಸಂಚು ಎಂದು ಇರಾನ್ ಕಿಡಿಕಾರಿದೆ. ಅಮೆರಿಕದ ದಿಗ್ಬಂಧನ ಹೀಗೆಯೇ ಮುಂದುವರಿದರೆ, ಯಾರೂ ಊಹಿಸದ ರೀತಿಯಲ್ಲಿ ತಿರುಗೇಟು ನೀಡಲಾಗುವುದು ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ಎಚ್ಚರಿಕೆ ನೀಡಿದ್ದಾರೆ.

“ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಅಮೆರಿಕವು ಹಾರ್ಮುಜ್ ಜಲಸಂಧಿಯಲ್ಲಿ ಈ ಅಕ್ರಮ ದಿಗ್ಬಂಧನವನ್ನು ಮುಂದುವರಿಸಿದರೆ, ಪ್ರತೀಕಾರವಾಗಿ ನಾವು ಪ್ರಾದೇಶಿಕ ಸಮತೋಲನವನ್ನೇ ಬದಲಾಯಿಸುವ ಅಭೂತಪೂರ್ವ ಸೇನಾ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಅವರು ಹೇಳಿದ್ದಾರೆ. ಇರಾನ್ ನ ಹಲವಾರು ಮಿಲಿಟರಿ ಕಮಾಂಡರ್ಗಳು ಈಗಾಗಲೇ ಅಮೆರಿಕದ ನೌಕಾ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಪ್ರತಿದಾಳಿಗೆ ಸಜ್ಜಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹಗ್ಗಜಗ್ಗಾಟದ ನಡುವೆ ಬೆಲೆ ಏರಿಕೆ
ಒಂದೆಡೆ ಇರಾನ್ ಮೊದಲು ವ್ಯಾಪಾರ ನಿರ್ಬಂಧಗಳನ್ನು ತೆರವುಗೊಳಿಸಬೇಕೆಂದು ಪಟ್ಟು ಹಿಡಿದಿದೆ. ಇನ್ನೊಂದೆಡೆ ಅಮೆರಿಕ ಮೊದಲು ಪರಮಾಣು ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಪಟ್ಟು ಹಿಡಿದಿದೆ. ಈ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಇದರ ನೇರ ಪರಿಣಾಮ ಅಮೆರಿಕ ಸೇರಿದಂತೆ ಎಲ್ಲಾ ದೇಶಗಳ ಜನರಿಗೆ ಆಗುತ್ತಿದೆ.

Exit mobile version