ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತ-ಪಾಕಿಸ್ತಾನ ನಡುವಿನ ಸೈನಿಕ ಸಂಘರ್ಷದ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಉಂಟಾದ ಭಾರತ-ಪಾಕಿಸ್ತಾನ ಸಂಘರ್ಷವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ. ಆದರೆ ಈ ಬಾರಿ ಹೊಸ ಟ್ವಿಸ್ಟ್ ನೀಡಿದ್ದಾರೆ. ಎರಡೂ ದೇಶಗಳ ಮೇಲೆ 200% ಸುಂಕ ವಿಧಿಸುವ ಬೆದರಿಕೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಸಂಘರ್ಷದಲ್ಲಿ 11 ಯುದ್ಧ ವಿಮಾನಗಳು ಹೊಡೆದುರುಳಿಸಲಾಗಿತ್ತು ಎಂದು ಹೇಳಿದ್ದಾರೆ.
ಟ್ರಂಪ್ ಹೇಳಿದ್ದೇನು?
ವಾಷಿಂಗ್ಟನ್‌ನಲ್ಲಿ ನಡೆದ ಬೋರ್ಡ್ ಆಫ್ ಪೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾಗಿ ಹೇಳಿದರು. “ಇಬ್ಬರೂ ಹೋರಾಡಲು ಸಿದ್ಧರಾಗಿದ್ದರು. ನಾನು ಹೇಳಿದೆ ನೀವು ಯುದ್ಧ ಮುಂದುವರಿಸಿದರೆ ಎರಡೂ ದೇಶಗಳ ಮೇಲೆ 200% ಸುಂಕ ಹಾಕುತ್ತೇನೆ. ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಅದಾದ ನಂತರ ಇಬ್ಬರೂ ಮೃದುವಾದರು ಮತ್ತು ಸಂಘರ್ಷ ನಿಂತಿತು,” ಎಂದು ಹೇಳಿದರು.
ಅಲ್ಲದೇ, ಸಂಘರ್ಷದಲ್ಲಿ 11 ಯುದ್ಧ ವಿಮಾನಗಳು ಹೊಡೆದುರುಳಿಸಲಾಗಿತ್ತು ಎಂದು ಉಲ್ಲೇಖಿಸಿದರು. ಈ ಸಂಘರ್ಷದಿಂದ 25 ಮಿಲಿಯನ್ (2.5 ಕೋಟಿ) ಜೀವಗಳನ್ನು ಉಳಿಸಿದ್ದೇನೆ ಎಂದು ಪುನರುಚ್ಚರಿಸಿದರು. ಪಾಕಿಸ್ತಾನದ ಪ್ರಧಾನಿ ಷರೀಫ್ ಅವರನ್ನು ವೇದಿಕೆಯಲ್ಲಿ ಎದ್ದು ನಿಲ್ಲುವಂತೆ ಕೇಳಿ, ಅವರು ಟ್ರಂಪ್ ಅವರನ್ನು ಪ್ರಶಂಸಿಸಿದ್ದಾಗಿ ಹೇಳಿದರು. ಟ್ರಂಪ್ ಷರೀಫ್ ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು “ಮಹಾನ್ ವ್ಯಕ್ತಿಗಳು” ಮತ್ತು “ಒಳ್ಳೆಯ ಹೋರಾಟಗಾರರು” ಎಂದು ಕರೆದರು.
ಭಾರತದ ನಿಲುವು ಭಾರತ ಸರ್ಕಾರ ಯಾವುದೇ ಮೂರನೇ ದೇಶದ ಹಸ್ತಕ್ಷೇಪವನ್ನು ಯಾವಾಗಲೂ ನಿರಾಕರಿಸುತ್ತಾ ಬಂದಿದೆ. ಕಳೆದ ವರ್ಷದ ಸಂಘರ್ಷವು ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಆರಂಭಿಸಿದ ಆಪರೇಷನ್‌ನ ಭಾಗವಾಗಿತ್ತು ಎಂದು ಸ್ಪಷ್ಟಪಡಿಸಿದೆ. ಇದು ಎರಡು ದೇಶಗಳ ನಡುವಿನ ವಿಷಯವಾಗಿದ್ದು, ಮೂರನೇ ಪಕ್ಷದ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂಬ ನಿಲುವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಭಾರತ ಸರ್ಕಾರ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಟ್ರಂಪ್ ತಮ್ಮ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂಬ ಹೇಳಿಕೆಯನ್ನೂ ಪುನರುಚ್ಚರಿಸಿದರು. ಈ ಹೇಳಿಕೆಗಳು ಭಾರತದಲ್ಲಿ ಚರ್ಚೆಗೆ ಕಾರಣವಾಗಿವೆ.
