ತಿರುಪತಿ: ವಿಶ್ವವಿಖ್ಯಾತ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಬಳಸಲಾಗುತ್ತಿದ್ದ ತುಪ್ಪದ ಕುರಿತು ಉದ್ಭವಿಸಿದ್ದ ಭಾರೀ ವಿವಾದಕ್ಕೆ ಇದೀಗ ಮಹತ್ವದ ತಿರುವು ದೊರೆತಿದೆ. ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ಸಮಗ್ರ ತನಿಖೆಯ ಬಳಿಕ, ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ಗೋಮಾಂಸ ಅಥವಾ ಹಂದಿ ಕೊಬ್ಬು ಬಳಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಈ ತುಪ್ಪವು ಶುದ್ಧ ಹಸುವಿನ ತುಪ್ಪವಾಗಿರದೇ, ಸಸ್ಯಜನ್ಯ ಎಣ್ಣೆ ಹಾಗೂ ವಿವಿಧ ರಾಸಾಯನಿಕಗಳ ಮಿಶ್ರಣದಿಂದ ತಯಾರಿಸಲಾಗುತ್ತಿತ್ತು ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
ಈ ಪ್ರಕರಣದ ತನಿಖೆಯನ್ನು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೊಂಡಿದ್ದು, ಇತ್ತೀಚೆಗೆ ನೆಲ್ಲೂರಿನ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯಕ್ಕೆ ಅಂತಿಮ ಆರೋಪಪಟ್ಟಿಯನ್ನು ಸಲ್ಲಿಸಿದೆ. ಆರೋಪಪಟ್ಟಿಯ ಪ್ರಕಾರ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ಪೂರೈಕೆಯಾಗುತ್ತಿದ್ದ ತುಪ್ಪ ಹಾಲಿನ ಉತ್ಪನ್ನವೇ ಆಗಿರಲಿಲ್ಲ. ತಾಳೆ ಎಣ್ಣೆ, ತಾಳೆ ಬೀಜದ ಎಣ್ಣೆ ಸೇರಿದಂತೆ ಇತರ ಸಸ್ಯಜನ್ಯ ಎಣ್ಣೆಗಳನ್ನೇ ಮೂಲ ಪದಾರ್ಥವಾಗಿ ಬಳಸಲಾಗುತ್ತಿತ್ತು.
ತುಪ್ಪಕ್ಕೆ ಶುದ್ಧ ಹಸುವಿನ ತುಪ್ಪದ ಬಣ್ಣ, ವಾಸನೆ ಮತ್ತು ರುಚಿ ಬರಲೆಂದು ಅಸಿಟಿಕ್ ಆ್ಯಸಿಡ್ ಎಸ್ಟರ್, ಬೀಟಾ ಕ್ಯಾರೊಟಿನ್ ಮೊದಲಾದ ರಾಸಾಯನಿಕಗಳನ್ನು ಸೇರಿಸಲಾಗುತ್ತಿತ್ತು. ಇದರಿಂದ ಪ್ರಯೋಗಾಲಯದ ಪರೀಕ್ಷೆಗಳಲ್ಲೂ ತುಪ್ಪ ಮಾನದಂಡಗಳಿಗೆ ತಕ್ಕಂತೆ ಕಾಣುವಂತೆ ಮಾಡಲಾಗುತ್ತಿತ್ತು. ಈ ಅಕ್ರಮ ವ್ಯವಹಾರವು ಒಂದೆರಡು ವರ್ಷಗಳಲ್ಲ, ಹಲವು ವರ್ಷಗಳಿಂದ ನಡೆಯುತ್ತಿದ್ದು, ಸುಮಾರು 68 ಲಕ್ಷ ಕಿಲೋಗ್ರಾಂಗಳಷ್ಟು ನಕಲಿ ತುಪ್ಪವನ್ನು 250 ಕೋಟಿ ರೂಪಾಯಿ ಮೌಲ್ಯದಲ್ಲಿ ಪೂರೈಕೆ ಮಾಡಲಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ತುಪ್ಪದ ಮರುಬಳಕೆ
ತನಿಖೆಯಲ್ಲಿ ಮತ್ತೊಂದು ಗಂಭೀರ ಅಂಶವೂ ಬೆಳಕಿಗೆ ಬಂದಿದೆ. ತುಪ್ಪ ಟ್ಯಾಂಕರ್‌ಗಳನ್ನು ನಾಶಪಡಿಸುವ ಬದಲು, ಮರುಬಳಕೆ ಮಾಡಲಾಗಿದೆ. ಇಂತಹ ಕೆಲ ತಿರಸ್ಕೃತ ಬ್ಯಾಚ್‌ಗಳಲ್ಲಿ ಹಂದಿ ಹಾಗೂ ಗೋವಿನ ಕೊಬ್ಬಿನ ಅಂಶಗಳು ಪತ್ತೆಯಾಗಿವೆ. ಆದರೆ, ಈ ತುಪ್ಪವನ್ನು ಲಡ್ಡು ಪ್ರಸಾದ ತಯಾರಿಕೆಗೆ ಬಳಸಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಅಂದರೆ, ಅಧಿಕೃತವಾಗಿ ಪರೀಕ್ಷಿಸಿ ಅನುಮೋದಿಸಿದ ತುಪ್ಪದಲ್ಲಿ ಯಾವುದೇ ಪ್ರಾಣಿ ಕೊಬ್ಬು ಇರಲಿಲ್ಲ ಎಂಬುದನ್ನು ತನಿಖಾ ಸಂಸ್ಥೆ ಖಚಿತಪಡಿಸಿದೆ.
36 ಮಂದಿಯ ವಿರುದ್ಧ ಆರೋಪ
ಅಂತಿಮ ಆರೋಪಪಟ್ಟಿಯಲ್ಲಿ ಒಟ್ಟು 36 ಮಂದಿ ಆರೋಪಿಗಳಾಗಿ ಗುರುತಿಸಲಾಗಿದೆ. ಇವರಲ್ಲಿ ಟಿಟಿಡಿ ಆಡಳಿತ ಮಂಡಳಿಯ ಕೆಲವು ಅಧಿಕಾರಿಗಳು, ಉತ್ತರಾಖಂಡ ಮೂಲದ ತುಪ್ಪ ಪೂರೈಕೆದಾರರು, ಗುಣಮಟ್ಟ ಪರೀಕ್ಷೆ ನಡೆಸಿ ಸುಳ್ಳು ವರದಿ ನೀಡಿದ ಪ್ರಯೋಗಾಲಯ ಸಿಬ್ಬಂದಿ, ಲಂಚ ಹಾಗೂ ಉಡುಗೊರೆ ಪಡೆದು ಅಕ್ರಮಕ್ಕೆ ಸಹಕರಿಸಿದ ಮಧ್ಯವರ್ತಿಗಳು ಸೇರಿದ್ದಾರೆ.
