ತಿರುಪತಿ ನ.23: ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಾಲಯದಲ್ಲಿ ಮಹಾಪ್ರಸಾದವಾದ ಲಡ್ಡುಗಳ ಗುಣಮಟ್ಟದ ಕುರಿತು ಗಂಭೀರ ಆರೋಪಗಳು ಬೆಳಕಿಗೆ ಬರುತ್ತಿದ್ದು, ಲಡ್ಡು ಪ್ರಸಾದದಲ್ಲಿ ಬೃಹತ್ ಮಟ್ಟದ ಕಲಬೆರಕೆ ನಡೆದಿರುವುದು ಈಗ ದಾಖಲೆಗಳ ಮೂಲಕ ಸಾಬೀತಾಗಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
2019 ರಿಂದ 2024 ರವರೆಗೆ, ಕಳೆದ ಐದು ವರ್ಷಗಳಲ್ಲಿ, ತಿರುಮಲಕ್ಕೆ ಭೇಟಿ ನೀಡಿದ ಸುಮಾರು 11 ಕೋಟಿ ಭಕ್ತರಿಗೆ 48.76 ಕೋಟಿ ಲಡ್ಡುಗಳನ್ನು ವಿತರಿಸಲಾಗಿದೆ. ಇದರಲ್ಲಿ 20 ಕೋಟಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬುದು ಟಿಟಿಡಿ ಅಧ್ಯಕ್ಷರು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಟಿಟಿಡಿ ಅಧಿಕಾರಿಗಳು ನಡೆಸಿದ ಲೆಕ್ಕಪತ್ರ, ಉತ್ಪಾದನೆ-ಮಾರಾಟದ ದಾಖಲೆಗಳು ಹಾಗೂ ಭಕ್ತರ ಆಧಾರದ ಮೇಲೆ, ದೇವಾಲಯದಲ್ಲಿ ಬಳಸಿದ ತುಪ್ಪದ ಪ್ರಮಾಣ, ಖರೀದಿ ದಾಖಲೆಗಳು ಮತ್ತು ದೈನಂದಿನ ಲಡ್ಡು ಉತ್ಪಾದನೆಗೆ ಹೋಲಿಕೆ ಮಾಡಿದಾಗ ಈ ಕಲಬೆರಕೆಯ ನಿಜಾಂಶ ಬಹಿರಂಗವಾಗಿದೆ ಎಂದು ನಾಯ್ಡು ಹೇಳಿದ್ದಾರೆ.
ಟಿಟಿಡಿ ಮಾರುಕಟ್ಟೆ ವಿಭಾಗದ ದಾಖಲೆಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ದೇವಾಲಯವು ವಿವಿಧ ಡೈರಿಗಳಿಂದ ಒಟ್ಟು 1.61 ಕೋಟಿ ಕೆ.ಜಿ. ತುಪ್ಪ ಖರೀದಿಸಿದೆ. ಇದರ ಮೌಲ್ಯ 534.7 ಕೋಟಿ ರೂಪಾಯಿ. ಆದರೆ ಉತ್ತರಾಖಂಡದ ಭೋಲೆ ಬಾಬಾ ಡೈರಿ ಹಾಗೂ ಅದರ ಜೊತೆಯಲ್ಲಿದ್ದ ಇನ್ನಿತರ ಸರಬರಾಜು ಸಂಸ್ಥೆಗಳು ಪೂರೈಸಿದ 68 ಲಕ್ಷ ಕೆ.ಜಿ. ತುಪ್ಪ ನಕಲಿ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ದೃಢಪಡಿಸಿದೆ. ಇದು ಟಿಟಿಡಿಗೆ ಬಂದ ಒಟ್ಟು ತುಪ್ಪದ ಸುಮಾರು 42% ಆಗಿದೆ. ಇದೆ ಕಾರಣದಿಂದ, ಆ ಅವಧಿಯಲ್ಲಿ ತಯಾರಾದ ಲಕ್ಷಾಂತರ ಲಡ್ಡುಗಳಲ್ಲಿ ಶುದ್ಧ ತುಪ್ಪ ಬಳಸಲಾಗಿದೆಯೇ ಅಥವಾ ನಕಲಿ ತುಪ್ಪ ಸೇರಿತೇ ಎಂಬ ಅನುಮಾನ ಮೂಡಿದೆ.
ನಕಲಿ ತುಪ್ಪ ಪೂರೈಕೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಈ ವಿಷಯದಲ್ಲಿ ಈಗಾಗಲೇ ಹಲವು ಅಧಿಕಾರಿಗಳ ವಿಚಾರಣೆ ನಡೆಸಿದೆ. ಟಿಟಿಡಿ ಮಾಜಿ ಅಧ್ಯಕ್ಷ ಹಾಗೂ ವೈಎಸ್‌ಆರ್‌ಸಿಪಿ ಸಂಸದ ವೈ.ವಿ. ಸುಬ್ಬಾರೆಡ್ಡಿ, ಜೊತೆಗೆ ಮಾಜಿ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮಾರೆಡ್ಡಿ ಅವರನ್ನೂ ಪ್ರಶ್ನಿಸಲಾಗಿದೆ.
ತನಿಖಾ ತಂಡವು ನೆಲ್ಲೂರು ಕೋರ್ಟ್‌ಗೆ ಈಗಾಗಲೇ ಕೆಲವು ದಾಖಲೆಗಳೊಂದಿಗೆ ಅಫಿಡವಿಟ್ ಸಲ್ಲಿಸಿದ್ದು, ಡಿಸೆಂಬರ್ 15ರೊಳಗೆ ಪೂರಕ ಆರೋಪಪಟ್ಟಿ (ಸಪ್ಲಿಮೆಂಟರಿ ಚಾರ್ಜ್‌ಶೀಟ್) ಸಲ್ಲಿಸುವ ಸಾಧ್ಯತೆ ಇದೆ. ತನಿಖೆ ಮುಂದುವರಿಯುತ್ತಿದ್ದಂತೆ, ಈ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆಗಳನ್ನು ಅಧಿಕಾರಿಗಳು ಸೂಚಿಸಿದ್ದಾರೆ.
