ತಿರುಮಲ: ಕಲಿಯುಗ ವೈಕುಂಠ ಎಂದೇ ಖ್ಯಾತಿ ಪಡೆದಿರುವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 23ರಿಂದ 25ರವರೆಗೆ ಶ್ರೀವಾರಿ ಪವಿತ್ರೋತ್ಸವಗಳು ಭಕ್ತಿಭಾವದಿಂದ ನಡೆಯಲಿವೆ. ಆಗಸ್ಟ್ 22ರಂದು ಅಂಕುರಾರ್ಪಣ ಕಾರ್ಯಕ್ರಮದೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಪ್ರಕಟಿಸಿದೆ.
ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ದರ್ಶನ, ಸೇವೆ ಹಾಗೂ ವಸತಿ ಬುಕ್ಕಿಂಗ್‌ಗೆ ಮುಂದಾಗುತ್ತಿರುವ ಸಮಯದಲ್ಲೇ ಟಿಟಿಡಿ ಮಹತ್ವದ ಸೈಬರ್ ಎಚ್ಚರಿಕೆಯನ್ನು ನೀಡಿದೆ. ಶ್ರೀವಾರಿ ದರ್ಶನ ಮತ್ತು ಕೊಠಡಿ ಕಾಯ್ದಿರಿಸುವ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು, ವಾಟ್ಸಾಪ್ ಗುಂಪುಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ನಡೆಯುತ್ತಿರುವುದು ಪತ್ತೆಯಾಗಿದೆ.
ಟಿಟಿಡಿಯ ಅಧಿಕೃತ ಹೆಸರು, ಲೋಗೋ, ದೇವಸ್ಥಾನದ ಚಿತ್ರಗಳು ಹಾಗೂ ಟ್ರೇಡ್‌ಮಾರ್ಕ್‌ಗಳನ್ನು ದುರುಪಯೋಗಪಡಿಸಿಕೊಂಡು ಕೆಲವು ಸೈಬರ್ ವಂಚಕರು ನಕಲಿ ಬುಕ್ಕಿಂಗ್ ಪೋರ್ಟಲ್‌ಗಳನ್ನು ಸೃಷ್ಟಿಸಿದ್ದಾರೆ. “ತಕ್ಷಣ ಶೀಘ್ರ ದರ್ಶನ”, “ವಿಐಪಿ ಸೇವೆ”, “ಖಚಿತ ವಸತಿ” ಎಂಬ ಆಮಿಷ ತೋರಿಸಿ ಭಕ್ತರಿಂದ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಅಕ್ರಮಗಳ ವಿರುದ್ಧ ಟಿಟಿಡಿಯ ಐಟಿ ವಿಭಾಗ, ವಿಜಿಲೆನ್ಸ್ ಮತ್ತು ಸೈಬರ್ ಕ್ರೈಮ್ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಭಕ್ತರನ್ನು ವಂಚಿಸುತ್ತಿದ್ದ 259 ನಕಲಿ ವೆಬ್‌ಸೈಟ್‌ಗಳನ್ನು ಗುರುತಿಸಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಲ್ಲದೆ, ಈ ವಂಚನೆಗಳಲ್ಲಿ ಭಾಗಿಯಾಗಿದ್ದ ಹಲವು ವ್ಯಕ್ತಿಗಳ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಭಕ್ತರು ಯಾವುದೇ ಲಿಂಕ್ ಅಥವಾ ಸಂದೇಶವನ್ನು ನಂಬುವ ಮೊದಲು ಅದರ ಅಧಿಕೃತತೆಯನ್ನು ಪರಿಶೀಲಿಸಬೇಕು ಎಂದು ಟಿಟಿಡಿ ಮನವಿ ಮಾಡಿದೆ. ವಿಶೇಷವಾಗಿ ವಾಟ್ಸಾಪ್, ಟೆಲಿಗ್ರಾಂ ಅಥವಾ ಫೇಸ್‌ಬುಕ್ ಮೂಲಕ ಬರುವ ಬುಕ್ಕಿಂಗ್ ಆಫರ್‌ಗಳಿಗೆ ಹಣ ಪಾವತಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಶ್ರೀವಾರಿ ದರ್ಶನ, ಸೇವೆ ಹಾಗೂ ವಸತಿ ಬುಕ್ಕಿಂಗ್‌ಗಳನ್ನು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾತ್ರ ಮಾಡಬೇಕು. ಅಧಿಕೃತ ಪಾವತಿ ವಿಧಾನಗಳನ್ನು ಬಳಸುವುದರಿಂದ ಮಾತ್ರ ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಬಹುದು ಎಂದು ಟಿಟಿಡಿ ತಿಳಿಸಿದೆ. ಟಿಟಿಡಿಯ ಹೆಸರು, ಲೋಗೋ ಮತ್ತು ಬೌದ್ಧಿಕ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಾಪಿರೈಟ್, ಟ್ರೇಡ್‌ಮಾರ್ಕ್ ಹಾಗೂ ಸೈಬರ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
