ರಾಜಸ್ಥಾನ: ಜೋಧ್ಪುರದಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ ಶಾಲಾ ಉಪನ್ಯಾಸಕಿಯೊಬ್ಬರು ತನ್ನ ಮೂರು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಶುಕ್ರವಾರ ನಡೆದಿದೆ. ಮಹಿಳೆ ತನ್ನ ಪತಿ ದಿಲೀಪ್ ಮತ್ತು ಅತ್ತೆ-ಮಾವನಿಂದ ವರದಕ್ಷಿಣೆಗಾಗಿ ನಿರಂತರ ಕಿರುಕುಳಕ್ಕೊಳಗಾಗಿದ್ದರು ಎಂದು ಆಕೆ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ.
ಮಹಿಳೆ ತನ್ನ ಮನೆಗೆ ಹಿಂದಿರುಗಿದ ನಂತರ, ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿ, ತಾನು ಮತ್ತು ತನ್ನ ಮೂರು ವರ್ಷದ ಮಗಳ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಆಕೆಯ ಪತಿ ಮತ್ತು ಅತ್ತೆ-ಮಾವ ಇಬ್ಬರೂ ಮನೆಯಲ್ಲಿ ಇರಲಿಲ್ಲ. ದುರಂತದಲ್ಲಿ ಮಗು ನೆಲಕ್ಕೆ ಬಿದ್ದು, ತೀವ್ರ ಸುಟ್ಟಗಾಯಗಳಿಂದ ತಕ್ಷಣವೇ ಸಾವನ್ನಪ್ಪಿತ್ತು. ಮನೆಯಿಂದ ದಟ್ಟವಾದ ಹೊಗೆ ಹರಡುತ್ತಿದ್ದನ್ನು ಗಮನಿಸಿದ ನೆರೆಹೊರೆಯವರು ತಕ್ಷಣವೇ ಮಹಿಳೆಯ ಕುಟುಂಬಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಮತ್ತು ಕುಟುಂಬದವರು ಘಟನಾಸ್ಥಳಕ್ಕೆ ಆಗಮಿಸಿದಾಗ, ಮಗು ಈಗಾಗಲೇ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿತ್ತು. ಉಪನ್ಯಾಸಕಿಯನ್ನು ತಕ್ಷಣವೇ ಜೋಧ್ಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ತೀವ್ರ ಸುಟ್ಟಗಾಯಗಳಿಂದಾಗಿ ಚಿಕಿತ್ಸೆಯ ಸಮಯದಲ್ಲಿ ಆಕೆಯೂ ಕೊನೆಯುಸಿರೆಳೆದರು.
ಮಹಿಳೆಯ ತಂದೆ ಒಮಾರಾಮ್ ಬಿಷ್ಟೋಯ್, ಆಕೆಯ ಪತಿ ದಿಲೀಪ್ ಹಾಗೂ ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದಂಗಿಯಾವಾಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
