ತ್ರಿಶೂರ್‌ನಲ್ಲಿ ಭೀಕರ ಪಟಾಕಿ ಸ್ಫೋಟ: 10 ಮಂದಿ ಸಾ*ವು, ಹಲವರಿಗೆ ಗಾಯ

Untitled design 2026 04 21T204558.585

ತ್ರಿಶೂರ್ (ಕೇರಳ): ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕೋಡ್‌ನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೀಕರ ಪಟಾಕಿ ಸ್ಫೋಟದಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಸುಮಾರು 40 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 8 ಜನರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ದುರಂತವು ತಿರುವಾಂಬಾಡಿ ದೇವಸ್ಥಾನದ ಸಮೀಪದ ಪಟಾಕಿ ಶೆಡ್‌ನಲ್ಲಿ ನಡೆದಿದೆ.

ಅಪಘಾತ ಹೇಗೆ ಸಂಭವಿಸಿತು?
ಮೂಲಗಳ ಪ್ರಕಾರ, ತ್ರಿಶೂರ್ ಪೂರಂ ಹಬ್ಬದ ಸಿದ್ಧತೆಗಳ ಭಾಗವಾಗಿ ಪಟಾಕಿ ಸಾಮಗ್ರಿಗಳನ್ನು ಶೆಡ್‌ನಲ್ಲಿ ಸಂಗ್ರಹಿಸಿಡಲಾಗಿತ್ತು. ಸ್ಫೋಟ ಸಂಭವಿಸಿದ ಕೂಡಲೇ ಸಾಲು ಸಾಲಾಗಿ ಪಟಾಕಿಗಳು ಸ್ಫೋಟಗೊಳ್ಳುವ ಸದ್ದು ಇಡೀ ಪ್ರದೇಶವನ್ನು ಆವರಿಸಿತು.. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳೂ ಅಲುಗಾಡಿದವು. ಸ್ಥಳದಲ್ಲೇ ಅನೇಕ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ವಿವಿಧ ಸ್ಥಳಗಳಲ್ಲಿ ದೇಹದ ಭಾಗಗಳು ಪತ್ತೆಯಾಗುತ್ತಿವೆ.

ರಕ್ಷಣಾ ಕಾರ್ಯಾಚರಣೆ
ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ, ಪೊಲೀಸ್ ಮತ್ತು ತುರ್ತು ಸೇವಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದವು. ಇಲ್ಲಿಯವರೆಗೆ ಸುಮಾರು 13 ಮಂದಿಯನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಗಾಯಾಳುಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. 18 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಗಂಭೀರ ಸುಟ್ಟಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಸರ್ಕಾರದ ಕ್ರಮ
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯ ಗಂಭೀರತೆಯನ್ನು ಪರಿಗಣಿಸಿ, ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ನಿರ್ದೇಶಿಸಿದ್ದಾರೆ. ಅಗತ್ಯ ಔಷಧಗಳು ಮತ್ತು ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆಯಿದೆ.

ಕಾರಣ ಏನು?
ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೂರಂ ಹಬ್ಬದ ಅಂಗವಾಗಿ ನಡೆಯುತ್ತಿದ್ದ ಸಿದ್ಧತೆಗಳ ವೇಳೆ ಈ ಅವಘಡ ಸಂಭವಿಸಿದೆ. ಅಕ್ರಮ ಪಟಾಕಿ ಸಂಗ್ರಹವೇ, ಸುರಕ್ಷತಾ ನಿಯಮ ಉಲ್ಲಂಘನೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಮೃತರಲ್ಲಿ ಹೆಚ್ಚಿನವರು ಪಟಾಕಿ ಕಾರ್ಮಿಕರು ಮತ್ತು ಸ್ಥಳೀಯರು ಎಂದು ತಿಳಿದುಬಂದಿದೆ. ಸ್ಫೋಟದ ರಭಸಕ್ಕೆ ಶೆಡ್ ಸಂಪೂರ್ಣ ಕುಸಿದು ಬಿದ್ದಿದೆ. ಸುತ್ತಲಿನ ಪ್ರದೇಶದಲ್ಲಿ ಗಾಜು ಮತ್ತು ಕಿಟಕಿಗಳು ಒಡೆದುಹೋಗಿವೆ. 

Exit mobile version