ನವದೆಹಲಿ, ಜೂನ್ 16: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET-UG 2026) ಮರುಪರೀಕ್ಷೆಯನ್ನು ಪಾರದರ್ಶಕ ಹಾಗೂ ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ‘ಟೆಲಿಗ್ರಾಮ್’ (Telegram) ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಭಾರತದಲ್ಲಿ ಜೂನ್ 22, 2026 ರವರೆಗೆ ಟೆಲಿಗ್ರಾಮ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ.
ನೀಟ್ ಮರುಪರೀಕ್ಷೆ ಹಿನ್ನೆಲೆ ಏಕೆ ಈ ಕ್ರಮ?
ಜೂನ್ 21 ರಂದು ದೇಶಾದ್ಯಂತ ಬಿಗಿಯಾದ ಭದ್ರತೆಯೊಂದಿಗೆ ನೀಟ್ (UG) ಮರುಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ದೇಶದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ನೀಟ್ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕೇಂದ್ರ ಸರ್ಕಾರದ ಈ ತ್ವರಿತ ಮತ್ತು ಕಠಿಣ ನಿರ್ಧಾರವನ್ನು ಸ್ವಾಗತಿಸಿದೆ. “ಈ ತಾತ್ಕಾಲಿಕ ನಿಷೇಧವು ಪರೀಕ್ಷೆಯ ನ್ಯಾಯಸಮ್ಮತತೆಯನ್ನು ಕಾಪಾಡಲು ಮತ್ತು ದೇಶದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ತಡೆಯಲು ನೆರವಾಗಲಿದೆ” ಎಂದು ಎನ್ಟಿಎ ತಿಳಿಸಿದೆ.
ಎಷ್ಟು ದಿನಗಳ ಕಾಲ ನಿಷೇಧ?
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೀಡಿರುವ ಅಧಿಕೃತ ನಿರ್ದೇಶನದ ಪ್ರಕಾರ, ಭಾರತದಲ್ಲಿ ಜೂನ್ 22, 2026 ರವರೆಗೆ ಟೆಲಿಗ್ರಾಮ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಜೂನ್ 21ರಂದು ನಡೆಯುವ ನೀಟ್ ಮರುಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ವದಂತಿಗಳು ಹರಡದಂತೆ ತಡೆಯಲು ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.
ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯದ ಮೇಲೂ ನಿರ್ಬಂಧ
ಟೆಲಿಗ್ರಾಮ್ ಆಪ್ ಮೇಲಿನ ನಿಷೇಧ ಜೂನ್ 22ಕ್ಕೆ ಮುಗಿದರೂ, ಜೂನ್ 30ರವರೆಗೆ ಭಾರತದಲ್ಲಿ ಈ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ (Disable) ಟೆಲಿಗ್ರಾಮ್ ಸಂಸ್ಥೆಗೆ ಸರ್ಕಾರ ಆದೇಶಿಸಿದೆ. ಟೆಲಿಗ್ರಾಮ್‌ನಲ್ಲಿ ಹಳೆಯ ಸಂದೇಶಗಳ ಸಮಯವನ್ನು (Timestamp) ಬದಲಾಯಿಸದೆ, ಅವುಗಳ ಒಳಗಿನ ಪಠ್ಯವನ್ನು ಎಡಿಟ್ ಮಾಡಬಹುದಾಗಿದೆ. ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ, ತಮಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸಿಕ್ಕಿತ್ತು ಎಂದು ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಪ್ರಶ್ನೆಪತ್ರಿಕೆ ಸೋರಿಕೆ (Paper Leak) ವದಂತಿಗಳನ್ನು ಹರಡಲು ಈ ವೈಶಿಷ್ಟ್ಯವನ್ನು ಬಳಸಲಾಗುತ್ತಿತ್ತು.
ಭಾರತದಲ್ಲಿ ಟೆಲಿಗ್ರಾಮ್ ಬಳಕೆದಾರರು ಎಷ್ಟು ಮಂದಿ?
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸರಿಸುಮಾರು 10 ಕೋಟಿಗೂ ಹೆಚ್ಚು ಮಂದಿ ಟೆಲಿಗ್ರಾಮ್ ಸಕ್ರಿಯ ಬಳಕೆದಾರರಿದ್ದಾರೆ. ಜಾಗತಿಕವಾಗಿ ಟೆಲಿಗ್ರಾಮ್ ಆಪ್ ಡೌನ್ಲೋಡ್ ಆಗುವ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 22 ರಷ್ಟು ಪಾಲು ಭಾರತದ್ದೇ ಆಗಿದೆ. ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ಶೇ. 39 ರಷ್ಟು ಜನರು ವಿವಿಧ ಅಗತ್ಯಗಳಿಗಾಗಿ ಟೆಲಿಗ್ರಾಮ್ ಅನ್ನು ಬಳಸುತ್ತಾರೆ.
ವಂಚನೆ ತಡೆಗೆ ಸರ್ಕಾರದ ಮುನ್ನೆಚ್ಚರಿಕೆ
ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ತಾವೇ ಮೊದಲು ನೀಡುವುದಾಗಿ ಹೇಳಿ ಕೆಲವು ವಂಚಕರ ಜಾಲಗಳು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಅಭ್ಯರ್ಥಿಗಳು ಹಾಗೂ ಅವರ ಪೋಷಕರಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದವು. ಇಂತಹ ವಂಚನೆಗಳನ್ನು ತಡೆಯಲು ಸರ್ಕಾರವು ಈ ಕ್ರಮ ಕೈಗೊಂಡಿದೆ.
