ಚಹಾ ಕುಡಿಯಲು ಹೋದ ಚಾಲಕ: ಸರ್ಕಾರಿ ಬಸ್ ಎಗರಿಸಿ ಎಸ್ಕೆಪ್ ಆದ ಖದೀಮ

Untitled design 2026 07 22T220224.716

ಜಗತ್ಯಾಲ: ತೆಲಂಗಾಣದ ಜಗತ್ಯಾಲ ಜಿಲ್ಲೆಯಲ್ಲಿ ಮಂಗಳವಾರ ನಡೆದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದ್ದು, ಕೆಲ ಹೊತ್ತು ಸಿನಿಮಾ ದೃಶ್ಯವನ್ನೇ ನೆನಪಿಸುವಂತಹ ಹೈಡ್ರಾಮಾ ನಡೆಯಿತು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC)ಗೆ ಸೇರಿದ ಸರ್ಕಾರಿ ಬಸ್‌ನ್ನು ಅಪರಿಚಿತ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಿಂದಲೇ ಕಳವು ಮಾಡಿ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಹಲವು ಕಿಲೋಮೀಟರ್‌ಗಳ ಕಾಲ ಬೆನ್ನಟ್ಟಿ ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಕೊರಟ್ಲಾ ಬಸ್ ನಿಲ್ದಾಣದಲ್ಲಿ ಬಸ್ ತನ್ನ ನಿಗದಿತ ಸೇವೆಗೆ ಸಿದ್ಧವಾಗಿ ನಿಂತಿತ್ತು. ಈ ವೇಳೆ ಚಾಲಕ ಪ್ರವೀಣ್ ಕೆಲ ನಿಮಿಷಗಳ ಕಾಲ ಸಹೋದ್ಯೋಗಿಗಳೊಂದಿಗೆ ಚಹಾ ಕುಡಿಯಲು ತೆರಳಿದ್ದರು. ಇದೇ ಅವಕಾಶವನ್ನು ಬಳಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಬಸ್‌ಗೆ ಹತ್ತಿ ಎಂಜಿನ್ ಸ್ಟಾರ್ಟ್ ಮಾಡಿ ಅಲ್ಲಿಂದ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.

ಆರಂಭದಲ್ಲಿ ಬಸ್ ಚಲಿಸುತ್ತಿರುವುದನ್ನು ಗಮನಿಸಿದ ಚಾಲಕ, ಮೆಕ್ಯಾನಿಕ್ ಅಥವಾ ಸಿಬ್ಬಂದಿಯವರೇ ಬಸ್ ಸ್ಥಳಾಂತರಿಸುತ್ತಿರಬಹುದು ಎಂದು ಭಾವಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಬಸ್ ನಿಲ್ದಾಣದಿಂದ ಹೊರಟು ಮುಖ್ಯರಸ್ತೆಗೆ ಬಂದಾಗ ಅದು ಕಳ್ಳತನವಾಗಿರುವುದು ತಿಳಿದುಬಂದಿದೆ. ಕೂಡಲೇ ಚಾಲಕ ಹಾಗೂ ಸಾರಿಗೆ ಸಿಬ್ಬಂದಿ ಬೈಕ್‌ನಲ್ಲಿ ಬಸ್ ಬೆನ್ನಟ್ಟಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಎಚ್ಚೆತ್ತು ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿ ವಾಹನ ತಪಾಸಣೆ ಆರಂಭಿಸಿದರು. ಆದರೆ ಆರೋಪಿ ಬಸ್ ಅನ್ನು ನಿಜಾಮಾಬಾದ್ ದಿಕ್ಕಿನತ್ತ ಅತಿ ವೇಗದಲ್ಲಿ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಾ ಹಲವು ಕಡೆ ಸಂಚರಿಸಿದ್ದಾನೆ.

ಈ ವೇಳೆ ಅಷ್ಟಲಕ್ಷ್ಮಿ ದೇವಾಲಯದ ಸಮೀಪ ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೆ, ರಸ್ತೆ ಮಧ್ಯೆ ಬಂದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಆರೋಪಿಯನ್ನು ತಡೆಯಲು ಯತ್ನಿಸಿದ ಪೊಲೀಸ್ ಗಸ್ತು ವಾಹನಕ್ಕೂ ಬಸ್ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ರಸ್ತೆ ತುಂಬಾ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ಉದ್ದ ಸಾಲು ನಿರ್ಮಾಣವಾಗಿತ್ತು. ಸಾರ್ವಜನಿಕರು ಭಯಭೀತರಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಯತ್ನಿಸಿದ ದೃಶ್ಯಗಳು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸುಮಾರು ಹಲವು ಕಿಲೋಮೀಟರ್‌ಗಳ ಕಾಲ ನಡೆದ ಬೆನ್ನಟ್ಟಾಟದ ಬಳಿಕ ಹನುಮಾನ್ ದೇವಸ್ಥಾನದ ಸಮೀಪ ವೇಗವಾಗಿ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿದೆ. ಬಸ್ ನಿಂತ ತಕ್ಷಣ ಆರೋಪಿ ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಈಗಾಗಲೇ ಸ್ಥಳವನ್ನು ಸುತ್ತುವರಿದಿದ್ದ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಮೆಟ್‌ಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಆತ ಬಸ್ ಕಳವು ಮಾಡಲು ಕಾರಣವೇನು, ಪೂರ್ವಯೋಜಿತ ಕೃತ್ಯವೇ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಈ ಕೃತ್ಯ ಎಸಗಿದ್ದಾನೆಯೇ ಎಂಬ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Exit mobile version