ಹೈದರಾಬಾದ್: ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಸಂಕಿರೆಡ್ಡಿ ಭೀಮ್ ರೆಡ್ಡಿ ಅವರನ್ನು ಆದಾಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿರುವ ಆರೋಪದಡಿ ಬಂಧಿಸಲಾಗಿದೆ. ಅಧಿಕಾರಿಯ ನಿವಾಸ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು ₹300 ಕೋಟಿ ಮೌಲ್ಯದ ಆಸ್ತಿಗಳು ಪತ್ತೆಯಾಗಿದೆ.
ಹೈದರಾಬಾದ್‌ನ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ (PCS) ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮ್ ರೆಡ್ಡಿ ಅವರನ್ನು ನಗರದ ಇಬ್ರಾಹಿಂಬಾಗ್‌ನ ವೆಸೆಲ್ಲಾ ಮೆಡೋಸ್‌ನಲ್ಲಿರುವ ನಿವಾಸದಿಂದ ಬಂಧಿಸಲಾಗಿದೆ. ಬಳಿಕ ಅವರನ್ನು ವಿಶೇಷ ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಎಸಿಬಿ ಅಧಿಕಾರಿಗಳ ಪ್ರಕಾರ, ಸರ್ಕಾರಿ ಸೇವೆಯ ಅವಧಿಯಲ್ಲಿ ಭ್ರಷ್ಟಾಚಾರದ ಮೂಲಕ ಮತ್ತು ಸಂಶಯಾಸ್ಪದ ಹಣಕಾಸು ವ್ಯವಹಾರಗಳ ಮೂಲಕ ಅಧಿಕಾರಿಯು ತನ್ನ ಕಾನೂನುಬದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಸಂಪಾದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜುಲೈ 2ರಂದು ತೆಲಂಗಾಣ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಧಿಕಾರಿಯ ಸಂಬಂಧಿಕರು, ಸ್ನೇಹಿತರು, ಬೇನಾಮಿ ವ್ಯಕ್ತಿಗಳು ಹಾಗೂ ಆಪ್ತರಿಗೆ ಸೇರಿದ ಒಟ್ಟು 16 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.
ಈ ಶೋಧ ಕಾರ್ಯಾಚರಣೆ ವೇಳೆ ಹಲವು ಬೆಲೆಬಾಳುವ ಆಸ್ತಿಗಳು ಪತ್ತೆಯಾಗಿವೆ. ಹೈದರಾಬಾದ್‌ನ ವೆಸೆಲ್ಲಾ ಮೆಡೋಸ್‌ನಲ್ಲಿ ಐಷಾರಾಮಿ ವಿಲ್ಲಾ, ಟೆಲಿಕಾಂ ನಗರದಲ್ಲಿ ಬಹುಮಹಡಿ ಮನೆ ಮತ್ತು ಪೆಂಟ್‌ಹೌಸ್, ಗಚಿಬೌಲಿ, ತೆಲ್ಲಾಪುರ ಹಾಗೂ ಇತರ ಪ್ರದೇಶಗಳಲ್ಲಿ ಅನೇಕ ಫ್ಲ್ಯಾಟ್‌ಗಳು ಪತ್ತೆಯಾಗಿವೆ. ಜೊತೆಗೆ ಮಣಿಕೊಂಡದಲ್ಲಿ ವಾಣಿಜ್ಯ ಸಂಕೀರ್ಣದಲ್ಲಿ ಪಾಲುದಾರಿಕೆ, ವಾಣಿಜ್ಯ ಜಾಗ, ಪ್ರಗತಿ ರೆಸಾರ್ಟ್ಸ್‌ನಲ್ಲಿ ನಿವೇಶನ, ಸಂಗಾರೆಡ್ಡಿ, ವಿಕಾರಾಬಾದ್ ಹಾಗೂ ಇತರೆ ಭಾಗಗಳಲ್ಲಿ ಕೃಷಿ ಭೂಮಿಗಳೂ ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಇದರೊಂದಿಗೆ ಕರ್ನಾಟಕದಲ್ಲಿಯೂ ಅಧಿಕಾರಿಗೆ ಸೇರಿದ ಕೃಷಿ ಭೂಮಿಗಳು ಮತ್ತು ಬೆಂಗಳೂರು ದೇವನಹಳ್ಳಿಯಲ್ಲಿ ಒಂದು ಎಕರೆ ಜಮೀನು ಇರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ತನಿಖೆಯಲ್ಲಿ ತೆಲಂಗಾಣ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ವ್ಯಾಪಕ ಪ್ರಮಾಣದ ಸ್ಥಿರಾಸ್ತಿಗಳು ಪತ್ತೆಯಾಗಿದೆ.
ಶೋಧ ಕಾರ್ಯಾಚರಣೆಯ ವೇಳೆ ಅಧಿಕಾರಿಯ ನಿವಾಸದಿಂದ ಸುಮಾರು ₹43.60 ಲಕ್ಷ ನಗದು, ಸುಮಾರು 2 ಕೆಜಿ ಚಿನ್ನಾಭರಣ, ಸುಮಾರು 20 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿ ಸುಮಾರು ₹19.91 ಲಕ್ಷ ಮೊತ್ತ ಪತ್ತೆಯಾಗಿದೆ. ಜೊತೆಗೆ ಖಾಸಗಿ ಸಂಸ್ಥೆಯೊಂದರಲ್ಲಿ ಸುಮಾರು ₹75 ಲಕ್ಷ ಹೂಡಿಕೆ ಮಾಡಿರುವ ದಾಖಲೆಗಳೂ ಅಧಿಕಾರಿಗಳ ಕೈಗೆ ಸಿಕ್ಕಿವೆ.
ಈ ಪ್ರಕರಣದಲ್ಲಿ ಅಧಿಕಾರಿಯ ವೈಯಕ್ತಿಕ ಕೈಬರಹದ ಡೈರಿ ಪತ್ತೆಯಾಗಿದೆ. ಎಸಿಬಿ ಮೂಲಗಳ ಪ್ರಕಾರ, ಚಾರ್ ಧಾಮ್ ಯಾತ್ರೆಗೆ ತೆರಳುವ ಮುನ್ನ ಭೀಮ್ ರೆಡ್ಡಿ ಈ ಡೈರಿಯನ್ನು ಬರೆದಿದ್ದು, ಅದರಲ್ಲಿ ಆಸ್ತಿಗಳು, ಹೂಡಿಕೆಗಳು, ಸಾಲ-ಬಾಧ್ಯತೆಗಳು ಹಾಗೂ ಬೇನಾಮಿ ವ್ಯಕ್ತಿಗಳ ವಿವರಗಳನ್ನು ದಾಖಲಿಸಿದ್ದಾನೆ ಎನ್ನಲಾಗಿದೆ. ಯಾತ್ರೆಗೆ ತೆರಳುವ ಮೊದಲು ಈ ಡೈರಿಯ ಸ್ಕ್ಯಾನ್ ಪ್ರತಿಗಳನ್ನು ತನ್ನ ಇಬ್ಬರು ಪುತ್ರರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ಬಹಿರಂಗವಾಗಿದೆ. ಡೈರಿಯಲ್ಲಿದ್ದ ಮಾಹಿತಿಯನ್ನೇ ಆಧರಿಸಿ ಎಸಿಬಿ ಅಧಿಕಾರಿಗಳು ಹಲವು ಆಸ್ತಿಗಳನ್ನು ಗುರುತಿಸಿ ಪರಿಶೀಲನೆ ನಡೆಸಿದ್ದಾರೆ.
