ಮಗು ಬೇಕಿದ್ದರೆ ನಿನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸು: ನಾಸಿಕ್ TCS ಉದ್ಯೋಗಿಯ ಶಾಕಿಂಗ್ ಆರೋಪ

Untitled design 2026 04 16T113623.547

ನಾಸಿಕ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಶಾಖೆಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮತಾಂತರದ ಆರೋಪಗಳ ನಡುವೆ, ಈಗ ಪುರುಷ ಸಹೋದ್ಯೋಗಿಯೊಬ್ಬರು ತಮಗಾದ ಕಿರುಕುಳದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಅವರ ಟೀಮ್ ಲೀಡರ್‌ಗಳು ತಮ್ಮನ್ನು ಬಲವಂತವಾಗಿ ನಮಾಜ್ ಮಾಡಿಸಿದ್ದು, ಕಲ್ಮಾ ಓದಿಸಿ, ತಲೆಗೆ ಟೋಪಿ (skullcap) ಧರಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವೈಯಕ್ತಿಕ ಜೀವನದ ಅವಹೇಳನ

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸಂತ್ರಸ್ತ ವ್ಯಕ್ತಿ, ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲದ ವಿಷಯವನ್ನು ಆರೋಪಿಗಳು ಹೀಯಾಳಿಸುತ್ತಿದ್ದರು. “ನೀನು ಎಷ್ಟೇ ವೈದ್ಯಕೀಯ ಚಿಕಿತ್ಸೆ ಪಡೆದರೂ ಮಗು ಆಗುವುದಿಲ್ಲ. ನಿನಗೆ ಮಗು ಬೇಕಿದ್ದರೆ ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳುಹಿಸು” ಎಂದು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿದ್ದಾರೆ.

ಯಾರು ಆರೋಪಿಗಳು?

ಟೀಮ್ ಲೀಡರ್ ತೌಸಿಫ್ ಅಖ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ಕಿರುಕುಳ ನೀಡಿದ ಪ್ರಮುಖ ಆರೋಪಿಗಳು. ಸಂತ್ರಸ್ತ ಹಿಂದೂ ಧರ್ಮದ ಅನುಯಾಯಿಯಾಗಿದ್ದು, ರುದ್ರಾಕ್ಷಿ ಮಾಲೆ ಧರಿಸುತ್ತಿದ್ದರು. ಅದನ್ನು ತೆಗೆಯುವಂತೆ ಒತ್ತಾಯಿಸಲಾಯಿತು ಮತ್ತು ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಲಾಗುತ್ತಿತ್ತು ಎನ್ನಲಾಗಿದೆ.

ಬಲವಂತದ ನಮಾಜ್ ಮತ್ತು ಅವಮಾನ

2023ರ ಈದ್ ಹಬ್ಬದಂದು ತೌಸಿಫ್ ತನ್ನ ಮನೆಗೆ ಕರೆದೊಯ್ದು ಬಲವಂತವಾಗಿ ನಮಾಜ್ ಮಾಡಿಸಿದ್ದಲ್ಲದೆ, ಆ ಫೋಟೋಗಳನ್ನು ಕಂಪನಿಯ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿಕೊಂಡು ಅವಮಾನಿಸಿದ್ದಾರೆ. ಕಟ್ಟುನಿಟ್ಟಿನ ಸಸ್ಯಾಹಾರಿಯಾಗಿದ್ದ ಸಂತ್ರಸ್ತನಿಗೆ ಹೋಟೆಲ್‌ಗಳಲ್ಲಿ ಬಲವಂತವಾಗಿ ಮಾಂಸಾಹಾರ ಸೇವಿಸುವಂತೆ ಒತ್ತಾಯಿಸಲಾಗುತ್ತಿತ್ತು.

ತಂದೆಯ ಆರೋಗ್ಯದ ವಿಚಾರದಲ್ಲೂ ಮತಾಂತರ ಪ್ರಚೋದನೆ

ಸಂತ್ರಸ್ತನ ತಂದೆಗೆ ಪಾರ್ಶ್ವವಾಯು (paralytic attack) ಆದಾಗ, “ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ನಿನ್ನ ತಂದೆ ಗುಣಮುಖರಾಗುತ್ತಾರೆ” ಎಂದು ಆರೋಪಿಗಳು ಹೇಳಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 2022 ರಿಂದ ಮಾರ್ಚ್ 2026 ರವರೆಗೆ ಈ ಕಿರುಕುಳ ಮುಂದುವರಿದಿದೆ. 

ಪೊಲೀಸ್ ಕ್ರಮ ಮತ್ತು ತನಿಖೆ

ನಾಸಿಕ್ ಪೊಲೀಸರು TCS ಕಚೇರಿಯಲ್ಲಿ ರಹಸ್ಯ ಕಾರ್ಯಾಚರಣೆ (Covert Operation) ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು ಒಂಬತ್ತು ಎಫ್‌ಐಆರ್ (FIR) ದಾಖಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಮಲೇಷ್ಯಾ ಮೂಲದ ಪ್ರಚಾರಕನಿಗೂ ಈ ತಂಡಕ್ಕೆ ಸಂಪರ್ಕವಿರುವ ಶಂಕೆಯಿದೆ. ಪ್ರಕರಣದ ತನಿಖೆ ಚುರುಕುಗೊಂಡಿದೆ.

Exit mobile version