SIR ಕರಡು ಪಟ್ಟಿ ಪ್ರಕಟ; ಚೆನ್ನೈನಲ್ಲಿ 14.25 ಲಕ್ಷ ಮತದಾರರ ಹೆಸರು ಡಿಲೀಟ್‌

Untitled design 2025 12 19T211035.023

ಚೆನ್ನೈ: ತಮಿಳುನಾಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಭಾರತೀಯ ಚುನಾವಣಾ ಆಯೋಗ (Election Commission of India) ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಪರಿಷ್ಕರಣೆಯಲ್ಲಿ ಭಾರೀ ಸಂಖ್ಯೆಯ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ರಾಜಧಾನಿ ಚೆನ್ನೈನಲ್ಲಿ ಮಾತ್ರವೇ 14.25 ಲಕ್ಷ ಮತದಾರರ ಹೆಸರುಗಳು ಡಿಲಿಟ್ ಆಗಿರುವುದು ಗಮನ ಸೆಳೆದಿದೆ.

ಕರಡು SIR ಪಟ್ಟಿಯ ಪ್ರಕಾರ, ಚೆನ್ನೈ ನಗರದ ಒಟ್ಟು ಮತದಾರರ ಸಂಖ್ಯೆ ಈ ಹಿಂದೆ 40.04 ಲಕ್ಷವಾಗಿದ್ದು, ಈಗ ಅದು 25.79 ಲಕ್ಷಕ್ಕೆ ಇಳಿಕೆಯಾಗಿದೆ.. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಈ ಅಳವಡಿಕೆಯ ಹಿಂದೆ ಹಲವಾರು ಪ್ರಮುಖ ಕಾರಣಗಳಿವೆ.

ಚೆನ್ನೈನಲ್ಲಿ ತೆಗೆದುಹಾಕಲಾದ ಮತದಾರರಲ್ಲಿ 1.56 ಲಕ್ಷ ಮಂದಿ ಮೃತರಾಗಿರುವುದು ದೃಢಪಟ್ಟಿದೆ. ಇನ್ನು 27,323 ಮತದಾರರು ತಮ್ಮ ಪಟ್ಟಿಯಲ್ಲಿರುವ ವಿಳಾಸಗಳಲ್ಲಿ ಲಭ್ಯವಾಗಿಲ್ಲ ಎಂದು ಗುರುತಿಸಲಾಗಿದೆ. ಅತ್ಯಂತ ಹೆಚ್ಚಿನ ಸಂಖ್ಯೆಯಾದ 12.22 ಲಕ್ಷ ಮತದಾರರು ತಮ್ಮ ನಿವಾಸವನ್ನು ಬದಲಾಯಿಸಿಕೊಂಡಿರುವುದರಿಂದ ಪಟ್ಟಿಯಿಂದ ಹೊರಗಿಡಲಾಗಿದೆ. ಜೊತೆಗೆ 18,772 ಡಬಲ್ ನೋಂದಣಿ ಪ್ರಕರಣಗಳನ್ನೂ ಪತ್ತೆಹಚ್ಚಲಾಗಿದೆ.

ಚೆನ್ನೈ ಮಾತ್ರವಲ್ಲದೆ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ದೊಡ್ಡ ಮಟ್ಟದಲ್ಲಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕೊಯಮತ್ತೂರು ಜಿಲ್ಲೆಯಲ್ಲಿ 6.50 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದಿಂಡಿಗಲ್ ಜಿಲ್ಲೆಯಲ್ಲಿ 2.34 ಲಕ್ಷ ಮತದಾರರ ಹೆಸರುಗಳು ಅಳಿಸಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಪರಿಷ್ಕರಣೆಗೆ ಮೊದಲು ಇದ್ದ 19.35 ಲಕ್ಷದಿಂದ 16.09 ಲಕ್ಷಕ್ಕೆ ಇಳಿಕೆಯಾಗಿದೆ.

ಕರೂರ್ ಜಿಲ್ಲೆಯಲ್ಲಿ 79,690 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಿಂದ ಕರೂರ್‌ನ ಒಟ್ಟು ಮತದಾರರ ಸಂಖ್ಯೆ 8.79 ಲಕ್ಷದಿಂದ 8.18 ಲಕ್ಷಕ್ಕೆ ಕುಸಿದಿದೆ. ಕಾಂಚಿಪುರಂ ಜಿಲ್ಲೆಯಲ್ಲಿ 2.74 ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಚುನಾವಣಾ ಆಯೋಗದ ಪ್ರಕಾರ, ಈ ವಿಶೇಷ ತೀವ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಮತದಾರರ ಪಟ್ಟಿಯ ನಿಖರತೆಯನ್ನು ಹೆಚ್ಚಿಸುವುದಾಗಿದೆ. ಮೃತ ಮತದಾರರು, ನಕಲಿ ನೋಂದಣಿಗಳು, ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ಇರುವವರು ಹಾಗೂ ನಿವಾಸ ಬದಲಾಯಿಸಿದವರ ವಿವರಗಳನ್ನು ತೆಗೆದುಹಾಕುವ ಮೂಲಕ ಪಾರದರ್ಶಕ ಹಾಗೂ ನಿಖರ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು SIR ಪ್ರಕ್ರಿಯೆಯ ಗುರಿಯಾಗಿದೆ.

ಇದೇ ರೀತಿಯ ಪರಿಷ್ಕರಣೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲೂ ನಡೆದಿತ್ತು. ಅಲ್ಲಿ ಕರಡು ಮತದಾರರ ಪಟ್ಟಿಯಿಂದ ಒಟ್ಟು 58 ಲಕ್ಷ ಹೆಸರುಗಳನ್ನು ಅಳಿಸಲಾಗಿತ್ತು. ಈ ಪೈಕಿ 24 ಲಕ್ಷ ಮಂದಿ ಮೃತರಾಗಿದ್ದರೆ, 19 ಲಕ್ಷ ಹೆಸರುಗಳನ್ನು ‘ಸ್ಥಳಾಂತರಗೊಂಡವರು’ ಎಂದು ಗುರುತಿಸಲಾಗಿತ್ತು. 12 ಲಕ್ಷ ಮಂದಿ ‘ಕಾಣೆಯಾಗಿದ್ದಾರೆ’ ಎಂದು ದಾಖಲಿಸಲಾಗಿದ್ದು, ಸುಮಾರು 1.3 ಲಕ್ಷ ಪ್ರಕರಣಗಳು ನಕಲಿ ನೋಂದಣಿಗಳಾಗಿವೆ.

ಏನಿದು SIR?

SIR ಎಂದರೆ Special Intensive Revision (ವಿಶೇಷ ತೀವ್ರ ಪರಿಷ್ಕರಣೆ). ಇದು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಪ್ರಕ್ರಿಯೆಯಾಗಿದ್ದು, ಅರ್ಹ ಹೊಸ ಮತದಾರರನ್ನು ಸೇರಿಸುವುದು ಹಾಗೂ ಅನರ್ಹ ಅಥವಾ ಅಸತ್ಯ ಮಾಹಿತಿಯಿರುವ ಹೆಸರುಗಳನ್ನು ತೆಗೆದುಹಾಕುವುದನ್ನು ಒಳಗೊಂಡಿರುತ್ತದೆ.

Exit mobile version