ಚೆನ್ನೈ, ಜೂನ್ 21: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಪೆರಿಯಪಾಳ್ಯಂ ಸಮೀಪವಿರುವ ಖಾಸಗಿ ಸೀಫುಡ್ (ಸಮುದ್ರ ಆಹಾರ) ರಫ್ತು ಘಟಕದಲ್ಲಿ ಭಾನುವಾರ ಭೀಕರ ದುರಂತವೊಂದು ಸಂಭವಿಸಿದೆ. ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಅಮೋನಿಯಾ ಅನಿಲ ಸೋರಿಕೆಯಾದ ಪರಿಣಾಮ ಏಳು ಮಂದಿ ವಲಸೆ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ನಡೆದದ್ದು ಹೇಗೆ?
ಪೊಲೀಸ್ ಮೂಲಗಳ ಪ್ರಕಾರ, ಕಾರ್ಖಾನೆಯ ಆವರಣದಲ್ಲಿರುವ ವಸತಿಗೃಹದಲ್ಲಿ ಅಸ್ಸಾಂ, ಒಡಿಶಾ ಮತ್ತು ಜಾರ್ಖಂಡ್ ಮೂಲದ ಮಹಿಳೆಯರು ಸೇರಿದಂತೆ ಸುಮಾರು 120 ವಲಸೆ ಕಾರ್ಮಿಕರು ವಾಸವಾಗಿದ್ದರು. ಭಾನುವಾರ ಕಾರ್ಖಾನೆಗೆ ರಜೆ ಇದ್ದುದರಿಂದ ಎಲ್ಲಾ ಕಾರ್ಮಿಕರು ತಮ್ಮ ಕೊಠಡಿಗಳಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಪಕ್ಕದಲ್ಲೇ ಇದ್ದ ಸೀಫುಡ್ ಸಂಸ್ಕರಣಾ ಘಟಕದಿಂದ ಅಮೋನಿಯಾ ಅನಿಲವು ತೀವ್ರವಾಗಿ ಸೋರಿಕೆಯಾಗಿ ಇಡೀ ಆವರಣವನ್ನು ಆವರಿಸಿಕೊಂಡಿದೆ. ಅನಿಲ ಸೋರಿಕೆಯಾಗಿದ್ದರಿಂದ ಕಾರ್ಮಿಕರು ತೀವ್ರ ಉಸಿರಾಟದ ಸಮಸ್ಯೆಯಿಂದ ತತ್ತರಿಸಿದ್ದಾರೆ. ಕೆಲವರ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿದ್ದು, ಆವರಣದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ..
ರಕ್ಷಣಾ ಕಾರ್ಯಾಚರಣೆ ಮತ್ತು ಆಸ್ಪತ್ರೆಗೆ ದಾಖಲು
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಆಡಳಿತ ಮಂಡಳಿಯವರು ತಕ್ಷಣ ತೊಂದರೆಗೊಳಗಾದ ಕಾರ್ಮಿಕರನ್ನು ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಗಾಗಲೇ ಏಳು ಮಂದಿ ಕೊನೆಯುಸಿರೆಳೆದಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಒಂಬತ್ತು ಜನರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ಸರ್ಕಾರಿ ಸ್ಪ್ಯಾನ್ಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಪೆರಿಯಪಾಳ್ಯಂ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
NDRF ತಂಡದ ಕಾರ್ಯಾಚರಣೆ
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತದ ಮನವಿಯ ಮೇರೆಗೆ, ಅರಕ್ಕೋಣಂನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ರಾಸಾಯನಿಕ ಮತ್ತು ಜೈವಿಕ ವಿಪತ್ತು ನಿರ್ವಹಣಾ ವಿಶೇಷ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ಅನಿಲ ಪತ್ತೆ ಹಚ್ಚುವ ಅತ್ಯಾಧುನಿಕ ಉಪಕರಣಗಳು ಹಾಗೂ ರಕ್ಷಣಾ ಕವಚಗಳನ್ನು ಧರಿಸಿದ 30 ಸದಸ್ಯರ NDRF ತಂಡವು ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ.
ಅನಿಲ ಸೋರಿಕೆಯ ಮೂಲವನ್ನು ಪತ್ತೆಹಚ್ಚಿ ದುರಸ್ತಿ ಮಾಡಲಾಗಿದ್ದು, ಸೋರಿಕೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಆವರಣದ ಸುತ್ತಲಿನ ಪ್ರದೇಶವನ್ನು ಖಾಲಿ ಮಾಡಿಸಲಾಗಿದೆ.
ಸರ್ಕಾರದ ಕ್ರಮಗಳು
ಈ ಭೀಕರ ದುರಂತದ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದಾರೆ. ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶಕರು, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರನ್ನು ಒಳಗೊಂಡ ಮೂವರು ಸದಸ್ಯರ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಯು ಮುಂದಿನ 24 ಗಂಟೆಗಳಲ್ಲಿ ಮಧ್ಯಂತರ ವರದಿಯನ್ನು ಮತ್ತು ಮೂರು ದಿನಗಳಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಐಟಿ ಸಚಿವರು ತಕ್ಷಣವೇ ತಿರುವಳ್ಳೂರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಬಾಧಿತರಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿರುವ ಅವರು, ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.
