ಚೆನ್ನೈ, ಮೇ 8: ತಮಿಳುನಾಡು ರಾಜಕೀಯ ರಂಗದಲ್ಲಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ ಎಂದುಕೊಂಡಿದ್ದ ವೇಳೆ ಮತ್ತೊಂದು ನಾಟಕೀಯ ಟ್ವಿಸ್ಟ್ ಸಂಭವಿಸಿದೆ. ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದು, ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಡೌಟ್ ಎನ್ನಲಾಗಿದೆ.
ತಮಿಳುನಾಡು ರಾಜ್ಯಪಾಲರ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಜಯ್ ಅವರು ಕೇವಲ 116 ಶಾಸಕರ ಬಹುಮತ ಮಾತ್ರ ಸಾಬೀತುಪಡಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯಾಬಲ ವಿಜಯ್ ಬಳಿ ಇಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಬೆಂಬಲ ಹಿಂಪಡೆದ ಮುಸ್ಲಿಂ ಲೀಗ್
ವಿಜಯ್ ಅವರಿಗೆ ಕೊನೆಯ ಕ್ಷಣದಲ್ಲಿ ಮುಸ್ಲಿಂ ಲೀಗ್ (IUML) ಬೆಂಬಲ ಹಿಂಪಡೆದುಕೊಂಡಿರುವುದು ದೊಡ್ಡ ಸಂಕಷ್ಟ ಎದುರಾಗಿದೆ. ಡಿಎಂಕೆ ಮಿತ್ರಪಕ್ಷವಾಗಿಯೇ ಮುಂದುವರಿಯುವುದಾಗಿ ಮುಸ್ಲಿಂ ಲೀಗ್ ಘೋಷಿಸಿದೆ. ಡಿಎಂಕೆ ಚಿಹ್ನೆಯಡಿಯಲ್ಲಿ ಗೆದ್ದಿರುವ ಅವರ ಅಭ್ಯರ್ಥಿಗಳು ತಾಂತ್ರಿಕವಾಗಿ ವಿಜಯ್ ಅವರಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ವಾಪಸ್ ಪಡೆದುಕೊಂಡಿದ್ದಾರೆ.
ಮುಸ್ಲಿಂ ಲೀಗ್ ಜೊತೆಗೆ, ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದ ವಿಸಿಕೆ (VCK) ಮತ್ತು ಕೆಲವು ಸ್ವತಂತ್ರ ಶಾಸಕರು ಕೂಡ ತಮ್ಮ ಬೆಂಬಲ ವಾಪಸ್ ಪಡೆದುಕೊಂಡಿದ್ದಾರೆ. ವಿಸಿಕೆ ಸಂಸದೀಯ ಪಕ್ಷವು ವಿಜಯ್ ಅವರಿಗೆ ಬೆಂಬಲ ನೀಡಲು ನಾಲ್ಕು ಷರತ್ತುಗಳನ್ನು ಮುಂದಿಟ್ಟಿತ್ತು. ಆದರೆ, ರಾಜ್ಯಪಾಲರನ್ನು ಭೇಟಿಯಾದ ಬಳಿಕ ವಿಸಿಕೆ ಕೂಡ ತನ್ನ ಬೆಂಬಲವನ್ನು ಹಿಂಪಡೆದುಕೊಂಡಿದೆ.
ಲೋಕಭವನದಿಂದ ಇನ್ನೂ ಆಹ್ವಾನವಿಲ್ಲ
ಶನಿವಾರ ನಡೆಯಬೇಕಿದ್ದ ಪ್ರಮಾಣ ವಚನ ಸಮಾರಂಭಕ್ಕೆ ಇನ್ನೂ ಲೋಕಭವನದಿಂದ (ರಾಜ್ಯಪಾಲರ ಕಚೇರಿ) ಆಹ್ವಾನ ಹೋಗಿಲ್ಲ. ರಾಜಭವನಕ್ಕೆ ವಿಜಯ್ ಪರವಾಗಿ 116 ಶಾಸಕರ ಬೆಂಬಲ ಪತ್ರ ಮಾತ್ರ ತಲುಪಿದೆ. ಸರ್ಕಾರ ರಚಿಸಲು ಸಾಕಷ್ಟು ಸಂಖ್ಯಾಬಲ ಇಲ್ಲ ಎಂಬ ಕಾರಣಕ್ಕೆ ರಾಜ್ಯಪಾಲರ ಕಚೇರಿ ಸ್ಪಷ್ಟನೆ ನೀಡಿದೆ.
ವಿಜಯ್ ಅವರು ಸದನಕ್ಕೆ ಮುಕ್ತ ಪರೀಕ್ಷೆಗೆ ಮುಂದಾದರೆ ಮಾತ್ರ ಸರ್ಕಾರ ರಚಿಸಲು ಸಾಧ್ಯವಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ವಿಜಯ್ ಅವರ ರಾಜಕೀಯ ಭವಿಷ್ಯದ ಮೇಲೆ ಈ ಬೆಳವಣಿಗೆಯು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಹಾಕಿದೆ. ಮುಂದಿನ ಕೆಲವು ದಿನಗಳಲ್ಲಿ ವಿಜಯ್ ಅವರು ಹೆಚ್ಚಿನ ಶಾಸಕರನ್ನು ಒಪ್ಪಿಸಲು ಸಾಧ್ಯವಾಗುತ್ತದೆಯೇ ಅಥವಾ ರಾಜಕೀಯವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.
