ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಬೆಳ್ಳಿತೆರೆಯಲ್ಲಿ ಅಬ್ಬರಿಸುತ್ತಿದ್ದ ನಟ ವಿಜಯ್ ಈಗ ಇವಿಎಂ ಬಾಕ್ಸ್‌ನಲ್ಲೂ ಮ್ಯಾಜಿಕ್ ಮಾಡಿದ್ದಾರೆ. ಇಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ.
ಹೊಸ ಇತಿಹಾಸ ಸೃಷ್ಟಿಸಿದ ವಿಜಯ್ :
ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ವಿಜಯ್ ಅವರು ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಆರಂಭಿಕ ಟ್ರೆಂಡ್‌ಗಳಲ್ಲೇ ಅಬ್ಬರಿಸಿದ್ದ ಟಿವಿಕೆ, ಮಧ್ಯಾಹ್ನದ ವೇಳೆಗೆ ರಾಜ್ಯದಾದ್ಯಂತ ತನ್ನ ಪ್ರಾಬಲ್ಯ ಮೆರೆದಿದೆ. ಕಾವೇರಿ ಹರಿಯುವ ಡೆಲ್ಟಾ ಪ್ರದೇಶದಿಂದ ಹಿಡಿದು ಚೆನ್ನೈನ ನಗರ ಭಾಗಗಳವರೆಗೆ ವಿಜಯ್ ಅಭಿಮಾನಿಗಳ ಅಲೆ ಮತಗಳಾಗಿ ಪರಿವರ್ತನೆಯಾಗಿವೆ.
ಡಿಎಂಕೆ-ಎಐಎಡಿಎಂಕೆಗೆ ಭಾರಿ ಮುಖಭಂಗ :
ಕರುಣಾನಿಧಿ ಮತ್ತು ಜಯಲಲಿತಾ ಅವರ ನಂತರ ತಮಿಳುನಾಡು ರಾಜಕೀಯ ಅನಾಥವಾಗಿದೆ ಎಂಬ ಮಾತನ್ನು ವಿಜಯ್ ಸುಳ್ಳು ಮಾಡಿದ್ದಾರೆ. ಸ್ಟಾಲಿನ್ ಅವರ ಅನುಭವ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಅವರ ಸಂಘಟನಾ ಶಕ್ತಿಯನ್ನು ವಿಜಯ್ ಅವರ ‘ಬದಲಾವಣೆಯ ಮಂತ್ರ’ ಸೋಲಿಸಿದೆ. ಟಿವಿಕೆ ಅಭ್ಯರ್ಥಿಗಳು ಹಲವು ಹಿರಿಯ ಸಚಿವರ ವಿರುದ್ಧವೇ ಜಯ ಸಾಧಿಸುವತ್ತ ದಾಪುಗಾಲು ಹಾಕುತ್ತಿದ್ದಾರೆ.
ಗೆಲುವಿನ ಸಂಭ್ರಮ :
ಮ್ಯಾಜಿಕ್ ನಂಬರ್ ದಾಟುತ್ತಿದ್ದಂತೆ ತಮಿಳುನಾಡಿನಾದ್ಯಂತ ಟಿವಿಕೆ ಕಾರ್ಯಕರ್ತರು ಮತ್ತು ವಿಜಯ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಚೆನ್ನೈನ ಪಕ್ಷದ ಕಚೇರಿ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, “ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ವಿಜಯ್” ಎಂಬ ಘೋಷಣೆಗಳು ಮೊಳಗುತ್ತಿವೆ.
