TVK ಸರ್ಕಾರ ರಚನೆಗೆ ಗವರ್ನರ್‌‌ ಗ್ರೀನ್ ಸಿಗ್ನಲ್: ನಾಳೆ ಸಿಎಂ ಆಗಿ ವಿಜಯ್ ಪ್ರಮಾಣವಚನ

Untitled design 2026 05 08T195221.551

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್, ನಾಳೆ ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆ, ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಭವ್ಯ ಪ್ರಮಾಣವಚನ ಸಮಾರಂಭ ನಡೆಯಲಿದೆ.

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ್ದ TVK ಪಕ್ಷ, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ 108 ಸ್ಥಾನಗಳನ್ನು ಗೆದ್ದಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಿದ್ದ 118 ಸಂಖ್ಯಾಬಲವನ್ನು ತಲುಪಲು ವಿಜಯ್ ಕಳೆದ ನಾಲ್ಕು ದಿನಗಳಿಂದ ಅಲೆದಾಟ ನಡೆಸಿದ್ರು.

ಮೇ 6 ಮತ್ತು 7ರಂದು ರಾಜ್ಯಪಾಲರನ್ನು ಭೇಟಿಯಾಗಿದ್ದ ವಿಜಯ್, ಸರ್ಕಾರ ರಚನೆಗೆ ಹಕ್ಕೊತ್ತಾಯ ಮಂಡಿಸಿದ್ದರು. ಆದರೆ ಅಗತ್ಯ ಬಹುಮತದ ಬೆಂಬಲವನ್ನು ಒದಗಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರು. ಇದರ ಬಳಿಕ ಕಾಂಗ್ರೆಸ್, VCK ಹಾಗೂ ಎಡಪಕ್ಷಗಳ ಬೆಂಬಲ ಪಡೆಯಲು ವಿಜಯ್ ಸತತ ಸಭೆಗಳು ಮತ್ತು ಮಾತುಕತೆಗಳನ್ನು ನಡೆಸಿದ್ದರು.

ಕೊನೆಗೂ 120 ಶಾಸಕರ ಬೆಂಬಲದ ಪಟ್ಟಿ ಸಿದ್ಧಪಡಿಸಿದ TVK ನಾಯಕತ್ವ, ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿತು. ಬಹುಮತದ ಬೆಂಬಲದ ಬಗ್ಗೆ ತೃಪ್ತರಾದ ರಾಜ್ಯಪಾಲರು ಸರ್ಕಾರ ರಚನೆಗೆ ಅಧಿಕೃತ ಅನುಮತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶನಿವಾರ (ಮೇ 9) ಬೆಳಗ್ಗೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ಸಾವಿರಾರು TVK ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

Exit mobile version