ಲೇಖಕರು: ವೀರೇಶ್ ಪೂಜಾರ್, ಕಾಪಿ ಎಡಿಟರ್, ಗ್ಯಾರಂಟಿ ನ್ಯೂಸ್
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ದಶಕಗಳಿಂದ ಕಾಡುತ್ತಿದ್ದ ಅತಿ ದೊಡ್ಡ ಸಮಸ್ಯೆಗೆ ಕೊನೆಗೂ ಐತಿಹಾಸಿಕ ಮುಕ್ತಿ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇನ್ಮುಂದೆ ಜಸ್ಟಿಸ್ ಪ್ರಕ್ರಿಯೆ ಚುರುಕಾಗಲಿದ್ದು, ವರ್ಷಗಟ್ಟಲೆ ಕಾಯುತ್ತಿದ್ದ ಜನಸಾಮಾನ್ಯರ ಕಾಯುವಿಕೆಗೆ ಬ್ರೇಕ್ ಬೀಳಲಿದೆ. ಲಕ್ಷಾಂತರ ಬಾಕಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕೇಂದ್ರ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಾಧೀಶರ ಸಂಖ್ಯೆಯನ್ನು 34 ರಿಂದ 38 ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಸಿಜೆಐ ಹೊರತುಪಡಿಸಿ ನ್ಯಾಯಾಧೀಶರ ಸಂಖ್ಯೆಯು 33 ರಿಂದ 37 ಕ್ಕೆ ಏರಿಕೆಯಾಗಿದೆ. ಇದು ಕೇವಲ ಸಂಖ್ಯಾ ಬದಲಾವಣೆ ಅಲ್ಲ, ಬದಲಿಗೆ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಹೆಜ್ಜೆ ಇದಾಗಿದೆ.
ವೈವಿಧ್ಯತೆ ಮತ್ತು ಮಹಿಳಾ ಪ್ರಾತಿನಿಧ್ಯ
ಈ ಹೊಸ ನೇಮಕಾತಿಯಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಹಾಗೂ ಈಶಾನ್ಯ ರಾಜ್ಯಗಳಿಂದ ಹಿಡಿದು ಪಶ್ಚಿಮ ಭಾರತದವರೆಗಿನ ನ್ಯಾಯಾಧೀಶರುಗಳಿಗೆ ಸುಪ್ರೀಂ ಕೋರ್ಟ್‌ನ ಪೀಠದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದರೊಂದಿಗೆ ಭಾರತದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆ ನ್ಯಾಯಾಲಯದಲ್ಲೂ ಪ್ರತಿಫಲಿಸುವಂತಾಗಿದೆ. ಅಷ್ಟೇ ಅಲ್ಲ ಪೀಠದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕಾನೂನು ರಂಗದಲ್ಲಿ ಮಹಿಳೆಯರಿಗೆ ಅಗ್ರಸ್ಥಾನ ನೀಡುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸದೊಂದು ದಾರಿದೀಪವನ್ನು ತೋರಿಸಲಾಗಿದೆ.
ಮೇ 22 ಮತ್ತು ಮೇ 27 ರಂದು ನಡೆದ ಕೊಲಿಜಿಯಂ ಸಭೆಗಳ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನೇಮಕಾತಿಗೆ ಅನುಮೋದನೆ ನೀಡಿದ್ದರು. ಇದೇ ಜೂನ್ 02 ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ನೂತನ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಐವರು ನೂತನ ನ್ಯಾಯಮೂರ್ತಿಗಳು
1. ನ್ಯಾ. ಶೀಲ್ ನಾಗು
2. ನ್ಯಾ. ಶ್ರೀ ಚಂದ್ರಶೇಖರ್
3. ನ್ಯಾ. ಸಂಜೀವ್ ಸಚ್‌ದೇವ
4. ನ್ಯಾ. ಅರುಣ್ ಪಲ್ಲಿ
5. ಹಿರಿಯ ವಕೀಲೆ ವಿ. ಮೋಹನಾ
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ಐತಿಹಾಸಿಕ ನಿರ್ಧಾರವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ರಾಷ್ಟ್ರಪತಿಗಳು ‘ಸುಪ್ರೀಂ ಕೋರ್ಟ್ ತಿದ್ದುಪಡಿ ಸುಗ್ರೀವಾಜ್ಞೆ, 2026’ ಅನ್ನು ಹೊರಡಿಸಿದ ಕೆಲವೇ ವಾರಗಳಲ್ಲಿ ಈ ಪ್ರಮಾಣ ವಚನ ಸಮಾರಂಭ ನಡೆದಿದೆ.
1950 ರಿಂದ 2026: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಬೆಳೆದು ಬಂದ ಹಾದಿ
ದೇಶದ ಜನಸಂಖ್ಯೆ ಮತ್ತು ಪ್ರಕರಣಗಳು ಹೆಚ್ಚಿದಂತೆಲ್ಲಾ ಸಂವಿಧಾನದ ತಿದ್ದುಪಡಿಗಳ ಮೂಲಕ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುತ್ತಾ ಬರಲಾಗಿದೆ. ಆ ರೋಚಕ ಜರ್ನಿ ಇಲ್ಲಿದೆ.
ವರ್ಷ ಮತ್ತು ತಿದ್ದುಪಡಿ, ಒಟ್ಟು ನ್ಯಾಯಾಧೀಶರ ಸಂಖ್ಯೆ
1950 ಮೂಲ ಸಂವಿಧಾನ: 8 ಜನ (1 ಮುಖ್ಯ ನ್ಯಾಯಾಧೀಶರು + 7 ನ್ಯಾಯಾಧೀಶರು)
1950 ರ ತಿದ್ದುಪಡಿ 8 ರಿಂದ 11 ಕ್ಕೆ ಏರಿಕೆ
1960 ರ ತಿದ್ದುಪಡಿ 11 ರಿಂದ 14 ಕ್ಕೆ ಏರಿಕೆ
1978 ರ ತಿದ್ದುಪಡಿ 14 ರಿಂದ 18 ಕ್ಕೆ ಏರಿಕೆ
1986 ರ ತಿದ್ದುಪಡಿ 18 ರಿಂದ 26 ಕ್ಕೆ ಏರಿಕೆ
2009 ರ ತಿದ್ದುಪಡಿ 26 ರಿಂದ 31 ಕ್ಕೆ ಏರಿಕೆ
2019 ರ ತಿದ್ದುಪಡಿ 31 ರಿಂದ 33 ಕ್ಕೆ ಏರಿಕೆ
2026 ರ ಐತಿಹಾಸಿಕ ತಿದ್ದುಪಡಿ 33 ರಿಂದ 37 ಕ್ಕೆ ಹೆಚ್ಚಿಸುವ ಮೂಲಕ ಒಟ್ಟು ಸಂಖ್ಯೆ 38 ಕ್ಕೆ ಏರಿಕೆ
“ವಿಳಂಬವಾಗಿ ಸಿಗುವ ನ್ಯಾಯ, ನ್ಯಾಯ ನಿರಾಕರಣೆಗೆ ಸಮಾನ” ಎಂಬ ಮಾತಿದೆ. ಹೊಸ ನ್ಯಾಯಾಧೀಶರ ಆಗಮನದಿಂದ ಸುಪ್ರೀಂ ಕೋರ್ಟ್‌ನ ಕಾರ್ಯಕ್ಷಮತೆ ದುಪ್ಪಟ್ಟು ಆಗಲಿದ್ದು, ಜನಸಾಮಾನ್ಯರಿಗೆ ಸಕಾಲದಲ್ಲಿ ನ್ಯಾಯ ಸಿಗುವಂತಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.
