ನವದೆಹಲಿ: ಗರ್ಭ ಧರಿಸುವುದು ಅಥವಾ ಬೇಡವಾದ ಗರ್ಭವನ್ನು ತೆಗೆಸಿಕೊಳ್ಳುವುದು ಮಹಿಳೆಯ ಸಂಪೂರ್ಣ ವೈಯಕ್ತಿಕ ಹಕ್ಕು. ಮಗುವನ್ನು ಹೆರಲು ಇಷ್ಟವಿಲ್ಲದ ಮಹಿಳೆಯನ್ನು, ಅದರಲ್ಲೂ ವಿಶೇಷವಾಗಿ ಅಪ್ರಾಪ್ತ ಬಾಲಕಿಯನ್ನು ಗರ್ಭ ಮುಂದುವರಿಸುವಂತೆ ಒತ್ತಾಯಿಸುವ ಅಧಿಕಾರ ನ್ಯಾಯಾಲಯಗಳಿಗಿಲ್ಲ ಎಂದು ಸುಪ್ರೀಂಕೋರ್ಟ್ ದೃಢವಾಗಿ ಹೇಳಿದೆ. ಈ ಮೂಲಕ 30 ವಾರಗಳ ಗರ್ಭಿಣಿಯಾಗಿದ್ದ 17 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ.
ಮಹಾರಾಷ್ಟ್ರದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನೆರೆಮನೆಯ ಹುಡುಗನೊಂದಿಗಿನ ಸಂಬಂಧದಿಂದ ಗರ್ಭಿಣಿಯಾಗಿದ್ದಳು. ತಾನು ಮಗುವಿಗೆ ಜನ್ಮ ನೀಡಲು ಸಿದ್ಧವಿಲ್ಲ ಎಂದು ಆಕೆ ಗರ್ಭಪಾತಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಬಾಲಕಿಯ ಪರವಾಗಿ ತೀರ್ಪು ನೀಡಿದೆ.
ಗರ್ಭಧಾರಣೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಹಕ್ಕು ಆ ತಾಯಿಗೆ ಸೇರಿದ್ದು. ಇಲ್ಲಿ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ನಡೆದಿದೆಯೇ ಅಥವಾ ಲೈಂಗಿಕ ದೌರ್ಜನ್ಯದಿಂದ ನಡೆದಿದೆಯೇ ಎನ್ನುವುದಕ್ಕಿಂತ, ಆಕೆಯ ಸಂತಾನೋತ್ಪತ್ತಿ ಸ್ವಾಯತ್ತತೆ (Reproductive Autonomy) ಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮುಂಬೈನ ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ತನ್ನ ವರದಿಯಲ್ಲಿ, ಗರ್ಭಧಾರಣೆ ಮುಂದುವರಿದರೆ ತಾಯಿ ಅಥವಾ ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿತ್ತು. ಆದರೆ, ನ್ಯಾಯಾಲಯವು ವೈದ್ಯಕೀಯ ಅಂಶಗಳಿಗಿಂತ ಬಾಲಕಿಯ ಮಾನಸಿಕ ಸಿದ್ಧತೆ ಮತ್ತು ಘನತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿತು. ಒಂದು ವೇಳೆ ಕಾನೂನುಬದ್ಧವಾಗಿ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ, ಜನರು ಅಸುರಕ್ಷಿತ ಮತ್ತು ಅನಧಿಕೃತ ಹಾದಿ ತುಳಿಯಬಹುದು, ಇದು ಬಾಲಕಿಯ ಪ್ರಾಣಕ್ಕೆ ಸಂಚಕಾರ ತರಬಹುದು ಎಂದು ನ್ಯಾಯಮೂರ್ತಿ ನಾಗರತ್ನ ಅವರು ಆತಂಕ ವ್ಯಕ್ತಪಡಿಸಿದರು.
ಭಾರತದ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯ್ದೆ 2021ರ ಪ್ರಕಾರ, ಸಾಮಾನ್ಯ ಸಂದರ್ಭದಲ್ಲಿ 20 ವಾರಗಳವರೆಗೆ ಮತ್ತು ವಿಶೇಷ ಸಂದರ್ಭಗಳಲ್ಲಿ (ಅಪ್ರಾಪ್ತರು ಅಥವಾ ಸಂತ್ರಸ್ತರು) 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ಗರ್ಭಧಾರಣೆಯು 30 ವಾರಗಳಾಗಿದ್ದರೂ, ಬಾಲಕಿಯ ಭವಿಷ್ಯ ಮತ್ತು ಆಕೆಯ ಇಚ್ಛೆಯನ್ನು ಗೌರವಿಸಿ ಸುಪ್ರೀಂಕೋರ್ಟ್ ವಿಶೇಷಾಧಿಕಾರ ಬಳಸಿ ಅನುಮತಿ ನೀಡಿದೆ. ಮುಂಬೈನ ಜೆಜೆ ಆಸ್ಪತ್ರೆಗೆ ಕೂಡಲೇ ವೈದ್ಯಕೀಯ ಸುರಕ್ಷತಾ ಕ್ರಮಗಳೊಂದಿಗೆ ಗರ್ಭಪಾತ ಪ್ರಕ್ರಿಯೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
