65 ದಿನದ ಸಂಸಾರ.. 40 ಕೇಸ್.. 13 ವರ್ಷ ಕೋರ್ಟ್ ಅಲೆದಾಟ..! ದಂಪತಿಗೆ ಕೊನೆಗೂ ವಿಚ್ಛೇದನ ನೀಡಿದ ಸುಪ್ರೀಂ ಕೋರ್ಟ್

Untitled design 2026 01 21T141226.447

ನವದೆಹಲಿ: ಕೇವಲ ಎರಡು ತಿಂಗಳ ಕಾಲ ಜೊತೆಗಿದ್ದು, ಕಳೆದ 13 ವರ್ಷಗಳಿಂದ ಪರಸ್ಪರ 40ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಹೈರಾಣಾಗಿಸಿದ್ದ ದಂಪತಿಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ವಿಚ್ಛೇದನ ನೀಡಿದೆ ಮತ್ತು ತಲಾ 10,000 ರೂ. ದಂಡ ವಿಧಿಸಿದೆ. ಇದರಂತೆ ವೈವಾಹಿಕ ಜೀವನದಲ್ಲಿ ಸಾಮರಸ್ಯ ಇಲ್ಲದಿದ್ದಾಗ ನ್ಯಾಯಾಲಯದ ಮೊರೆ ಹೋಗಿ, ನ್ಯಾಯಾಲಯಗಳನ್ನೇ ತಮ್ಮ ವೈಯಕ್ತಿಕ ಸೇಡಿನ ಯುದ್ಧಭೂಮಿಯನ್ನಾಗಿ ಮಾಡಿಕೊಳ್ಳುವ ದಂಪತಿಗಳಿಗೆ ಸುಪ್ರೀಂ ಕೋರ್ಟ್ ತಕ್ಕ ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಈ ದಂಪತಿಗಳು ಜನವರಿ 2012ರಲ್ಲಿ ವಿವಾಹವಾಗಿದ್ದರು. ಆದರೆ, ಕೇವಲ 65 ದಿನಗಳ ನಂತರ ಪತ್ನಿಯು ಪತಿ ಮತ್ತು ಅವರ ಕುಟುಂಬದ ವಿರುದ್ಧ ದೌರ್ಜನ್ಯದ ಆರೋಪ ಮಾಡಿ, ಗಂಡ ಮನೆಯಿಂದ ಹೊರಬಂದಿದ್ದರು. ಅಂದಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ದಂಪತಿಗಳು ದೆಹಲಿ ಮತ್ತು ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಬ್ಬರ ಮೇಲೊಬ್ಬರು ಸುಮಾರು 40ಕ್ಕೂ ಹೆಚ್ಚು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಈ ಕಾನೂನು ಹೋರಾಟವು ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ದಂಪತಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ದಂಪತಿಗಳು ನ್ಯಾಯಾಲಯವನ್ನು ತಮ್ಮ ಯುದ್ದಭೂಮಿಯಾಗಿ ಪರಿಗಣಿಸಿ ತಮ್ಮ ವೈಯಕ್ತಿಕ ದ್ವೇಷ ಇತ್ಯರ್ಥಪಡಿಸಿಕೊಳ್ಳಲು, ಈ ವ್ಯವಸ್ಥೆ ಅವಕಾಶ ನೀಡಲಾಗುವುದಿಲ್ಲ ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿ ನ್ಯಾಯಾಲಯವು ಈ ದಂಪತಿಗಳಿಗೆ ವಿಚ್ಚೇದನ ನೀಡಿದೆ.

ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಪತಿ ಮತ್ತು ಪತ್ನಿ ಇಬ್ಬರಿಗೂ ತಲಾ 10,000 ರೂ. ದಂಡ ವಿಧಿಸಿದೆ. ಈ ಮೊತ್ತವನ್ನು ಸುಪ್ರೀಂ ಕೋರ್ಟ್ ಅಡ್ವಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್‌ನಲ್ಲಿ ಠೇವಣಿ ಇಡಲು ಆದೇಶಿಸಲಾಗಿದೆ. ಅಷ್ಟೇ ಅಲ್ಲದೆ, ಇನ್ನು ಮುಂದೆ ಇಬ್ಬರೂ ಪರಸ್ಪರರ ವಿರುದ್ಧ ಯಾವುದೇ ಹೊಸ ಪ್ರಕರಣ ದಾಖಲಿಸದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ.

ಇತ್ತೀಚಿನ ವರ್ಷಗಳಲ್ಲಿ ವೈವಾಹಿಕ ಮೊಕದ್ದಮೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದಕ್ಕೆ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಯಾವುದೇ ಕಾನೂನು ಹೋರಾಟ ಆರಂಭಿಸುವ ಮೊದಲು ಕುಟುಂಬದ ಹಿರಿಯರು ಮತ್ತು ಇತರೆ ಸದಸ್ಯರು ಮಧ್ಯಪ್ರವೇಶಿಸಿ ದಂಪತಿಗಳ ಜಗಳವನ್ನ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ. ದಂಪತಿಗಳು ಇನ್ನು ಒಂದಾಗಿರಲು ಸಧ್ಯವಿಲ್ಲ ಎನ್ನು ಪಟ್ಟಕ್ಕಟ ಇಬ್ಬರಲ್ಲೂ ಮನಸ್ತಾಪವಿದ್ದರೇ ಅದನ್ನು ಗೌರವಯುತವಾಗಿ ಕೊನೆಗೊಳಿಸುವುದು ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Exit mobile version