ಮುಂಬೈ: ಮಹಾರಾಷ್ಟ್ರ ರಾಜಕಾರಣದ ಧ್ರುವತಾರೆ, ದೀರ್ಘಕಾಲದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಇಡೀ ರಾಜ್ಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಜನವರಿ 28ರಂದು ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ದಾದಾ ಸಾವನ್ನಪ್ಪಿದ್ದರು. ಈ ದುರಂತದ ಬೆನ್ನಲ್ಲೇ ಈಗ ಅಧಿಕಾರದ ಚುಕ್ಕಾಣಿ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅವರ ಪತ್ನಿ ಸುನೇತ್ರಾ ಪವಾರ್ ಅವರ ಹೆಸರು ಮುಂಚೂಣಿಗೆ ಬಂದಿದೆ.
ನಾಳೆ ಪ್ರಮಾಣವಚನ ಸ್ವೀಕಾರ
ಮೂಲಗಳ ಪ್ರಕಾರ, ಶನಿವಾರ ಮಧ್ಯಾಹ್ನ 2 ಗಂಟೆಗೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಶಾಸಕಾಂಗ ಪಕ್ಷದ ತುರ್ತು ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಜಿತ್ ಪವಾರ್ ಅವರ ಉತ್ತರಾಧಿಕಾರಿಯಾಗಿ ಸುನೇತ್ರಾ ಪವಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶನಿವಾರ ಸಂಜೆ 5 ಗಂಟೆಗೆ ಮುಂಬೈನ ರಾಜಭವನದಲ್ಲಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ರಾಜಭವನದಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ಎನ್‌ಸಿಪಿ ಬಣಗಳ ವಿಲೀನಕ್ಕೆ ವೇದಿಕೆ ?
ಅಜಿತ್ ಪವಾರ್ ಅವರ ನಿಧನವು ಪಕ್ಷದ ಎರಡು ಬಣಗಳು (ಅಜಿತ್ ಮತ್ತು ಶರದ್ ಪವಾರ್ ಬಣ) ಒಂದಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. 1990ರ ದಶಕದಿಂದಲೂ ಅಜಿತ್ ಪವಾರ್ ಅವರ ಆಪ್ತರಾಗಿದ್ದ ಕಿರಣ್ ಗುಜಾರ್ ಅವರು ಈ ಬಗ್ಗೆ ಮಾತನಾಡುತ್ತಾ, ಅಜಿತ್ ದಾದಾ ಅವರು ಎರಡೂ ಬಣಗಳನ್ನು ವಿಲೀನಗೊಳಿಸಲು 100% ಉತ್ಸುಕರಾಗಿದ್ದರು. ಅನೇಕ ಸಕಾರಾತ್ಮಕ ವಿಷಯಗಳು ನಡೆಯುವ ಹಂತದಲ್ಲಿದ್ದವು, ಆದರೆ ವಿಧಿ ಆಟವೇ ಬೇರೆಯಾಗಿತ್ತು. ಈಗ ಬಾರಾಮತಿ ಮತ್ತು ರಾಜ್ಯದ ಹಿತದೃಷ್ಟಿಯಿಂದ ಎರಡೂ ಬಣಗಳು ಒಂದಾಗುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 28ರಂದು ಪುಣೆಯ ಬಾರಾಮತಿ ಬಳಿ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿತ್ತು. ಗುರುವಾರ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶರದ್ ಪವಾರ್ ಮತ್ತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಸೇರಿದಂತೆ ದೇಶದ ಪ್ರಮುಖ ನಾಯಕರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದರು. ಅಜಿತ್ ಪವಾರ್ ಅವರ ನಿರ್ಗಮನದಿಂದ ತೆರವಾದ ಹಣಕಾಸು ಮತ್ತು ಯೋಜನಾ ಇಲಾಖೆಯ ಜವಾಬ್ದಾರಿ ಈಗ ಸುನೇತ್ರಾ ಪವಾರ್ ಅವರ ಹೆಗಲಿಗೇರುವ ಸಾಧ್ಯತೆಯಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಫುಲ್ ಪಟೇಲ್ ಸಾರಥ್ಯ ವಹಿಸಲಿದ್ದಾರೆ ಎನ್ನಲಾಗಿದೆ.
