ಮದುವೆ ಮಂಟಪದಲ್ಲೂ ಬಿಡುವಿಲ್ಲದ ಕೆಲಸ: ತಾಳಿ ಕಟ್ಟಿದ ಕೂಡಲೇ ವಧು ಲ್ಯಾಪ್‌ಟಾಪ್ ಹಿಡಿದು ಮೀಟಿಂಗ್‌ ಅಟೆಂಡ್‌..!

Untitled design (14)

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಮತ್ತು ವೃತ್ತಿಜೀವನದ ಜವಾಬ್ದಾರಿಗಳು ಎಷ್ಟರಮಟ್ಟಿಗೆ ಹೆಚ್ಚಿವೆ ಎಂದರೆ, ಜನರಿಗೆ ತಮ್ಮ ಸ್ವಂತ ಮದುವೆಗೆ ರಜೆ ಸಿಗುವುದೂ ಕಷ್ಟವಾಗಿದೆ. ಆದರೆ, ಇದೀಗ ವೈರಲ್ ಆಗಿರುವ ಒಂದು ಘಟನೆಯಲ್ಲಿ, ವಧುವೊಬ್ಬಳು ಮದುವೆ ಮಂಟಪದಲ್ಲೇ ಕಚೇರಿಯ ಕೆಲಸ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ.

ಗೌರಿ ಅಗರ್ವಾಲ್ ಎಂಬ ಯುವತಿ ಹಾಗೂ ತಮ್ಮ ಸಹೋದರ ಮೆಹೂಲ್ ಅಗರ್ವಾಲ್ ಸೇರಿ 2025ರಲ್ಲಿ ‘ಕೋಯಲ್ ಎಐ’ ಎಂಬ ಸ್ಟಾರ್ಟ್‌ಅಪ್ ಕಂಪನಿಯನ್ನು ಆರಂಭಿಸಿದ್ದಾರೆ. ಗೌರಿ ಈ ಕಂಪನಿಯ ಸಿಟಿಒ ಆಗಿದ್ದರೆ, ಮೆಹೂಲ್ ಸಿಇಒ ಆಗಿದ್ದಾರೆ. ತಮ್ಮ ಸ್ವಂತ ಕಂಪನಿಯನ್ನು ಬೆಳೆಸುವ ಭರದಲ್ಲಿ ಇಬ್ಬರೂ ಹಗಲಿರುಳು ಶ್ರಮಿಸುತ್ತಿದ್ದಾರೆ.

ಮದುವೆಯ ನಂತರ ದಂಪತಿಗಳು ಹನಿಮೂನ್‌ಗೆ ತೆರಳಿದ್ದಾರೆ. ಅಲ್ಲಿಯಾದರೂ ಬಿಡುವು ಸಿಗಬಹುದು ಎಂದು ಅಂದುಕೊಂಡರೆ ಅಲ್ಲಿಯೂ ಕೆಲಸ ಬಿಟ್ಟಿಲ್ಲ. ಹನಿಮೂನ್‌ನಲ್ಲೂ ಗೌರಿ ದಿನಕ್ಕೆ ಕನಿಷ್ಠ 3 ಗಂಟೆಗಳ ಕಾಲ ಕಚೇರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡುತ್ತಾರೆ. ಈ ಕುರಿತು ಆಕೆಯ ಸಹೋದರ ಮೆಹೂಲ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ. ನನ್ನ ತಂಗಿ ಹನಿಮೂನ್‌ನಲ್ಲೂ ಲ್ಯಾಪ್‌ಟಾಪ್ ಮುಂದೆಯೇ ಇರುತ್ತಾಳೆ, ನಮಗೆ ಪೋಷಕರಿಂದ ಮಂಗಳಾರತಿ (ಬೈಗುಳ) ಆಗಿದೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾನೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಸ್ಟಾರ್ಟ್‌ಅಪ್ ಸಂಸ್ಥಾಪಕರ ಪಾಡು ಹೀಗೆ ಇರುತ್ತದೆ, ಕಂಪನಿ ಬೆಳೆಸುವಾಗ ರಜೆ ಎಂಬುದು ಕನಸಿನ ಮಾತು ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಹೆಚ್ಚಿನವರು ಗೌರಿಯ ಗಂಡನ ತಾಳ್ಮೆಯನ್ನು ಮೆಚ್ಚಿದ್ದಾರೆ. ಮದುವೆ ಮಂಟಪದಿಂದ ಹನಿಮೂನ್ ವರೆಗೂ ಪತ್ನಿಗಾಗಿ ಕಾಯುತ್ತಿರುವ ಈತನ ತಾಳ್ಮೆಗೆ ಪ್ರಶಸ್ತಿ ನೀಡಬೇಕು ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಕೆಲಸವೇ ಜೀವನವಲ್ಲ, ಜೀವನದ ಸುಂದರ ಕ್ಷಣಗಳನ್ನು ಆನಂದಿಸಿ ಎಂದು ದಂಪತಿಗೆ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಕೆಲಸದ ಬಗ್ಗೆ ಇರುವ ಬದ್ಧತೆ ಮೆಚ್ಚುವಂತದ್ದಾದರೂ, ತಮ್ಮ ಸ್ವಂತ ಮದುವೆ ಕಾರ್ಯಗಳಲ್ಲೂ ಈ ರೀತಿ ವಧು ಅಥವಾ ವರ ಕೆಲಸ ಮಾಡುವುದನ್ನ ನೋಡಿದರೆ ಅಚ್ಚರಿಯಾಗುತ್ತದೆ.

Exit mobile version