ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಕೇಂದ್ರ ಸರ್ಕಾರ ಮೌನವಾಗಿದೆ. ಇದನ್ನ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾದಾಗ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮೌನವಾಗಿರುವುದು ತಟಸ್ಥ ನಿಲುವಲ್ಲ, ಬದಲಾಗಿ ಅದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪರಾತ್ಯಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್ ಜೊತೆಗಿನ ಸಂಬಂಧ ಮತ್ತು ಇತಿಹಾಸ
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಅಂಕಣದಲ್ಲಿ ಸೋನಿಯಾ ಗಾಂಧಿ ಅವರು ಭಾರತ ಮತ್ತು ಇರಾನ್ ನಡುವಿನ ನಾಗರಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ನೆನಪಿಸಿದ್ದಾರೆ. ವಿಶೇಷವಾಗಿ 1994ರಲ್ಲಿ ಕಾಶ್ಮೀರ ವಿಷಯದಲ್ಲಿ ಇರಾನ್ ಭಾರತಕ್ಕೆ ನೀಡಿದ ಬೆಂಬಲವನ್ನು ಅವರು ಉಲ್ಲೇಖಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಬೆಂಬಲಿತ ನಿರ್ಣಯ ಮಂಡನೆಯಾಗದಂತೆ ತಡೆಯುವಲ್ಲಿ ಟೆಹ್ರಾನ್ ಮಹತ್ವದ ಪಾತ್ರ ವಹಿಸಿತ್ತು. ಆ ನಿರ್ಣಾಯಕ ಘಟ್ಟದಲ್ಲಿ ಇರಾನ್ ಭಾರತದ ಪರ ನಿಲ್ಲದಿದ್ದರೆ ಕಾಶ್ಮೀರ ಸಮಸ್ಯೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮಗೆ ಹಿನ್ನಡೆ ತರುತ್ತಿತ್ತು ಎಂದು ಅವರು ಬರೆದಿದ್ದಾರೆ.
ಸರ್ಕಾರದ ನಿಲುವಿಗೆ ಆಕ್ಷೇಪ
ಮಾರ್ಚ್ 1ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿರುವುದನ್ನು ಇರಾನ್ ದೃಢಪಡಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಯಾವುದೇ ಖಂಡನೆ ಅಥವಾ ಹೇಳಿಕೆ ನೀಡಿಲ್ಲ. ಕೇವಲ ಸಂಯಮ ಮತ್ತು ಉದ್ವಿಗ್ನತೆ ಕಡಿಮೆ ಮಾಡಿ ಎಂದು ಮಾತ್ರ ಕರೆ ನೀಡಿದೆ. ಇದನ್ನು ಪ್ರಶ್ನಿಸಿರುವ ಸೋನಿಯಾ ಗಾಂಧಿ, ವಿದೇಶಿ ನಾಯಕನ ಹತ್ಯೆಯು ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇಸ್ರೇಲ್ ಮತ್ತು ಅಮೆರಿಕದ ದಾಳಿಯ ಬಗ್ಗೆ ಮೌನ ವಹಿಸಿ, ಇರಾನ್‌ನ ಪ್ರತೀಕಾರದ ದಾಳಿಯನ್ನು ಮಾತ್ರ ಪ್ರಧಾನಿ ಟೀಕಿಸಿರುವುದು ನಮ್ಮ ವಿದೇಶಾಂಗ ನೀತಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಜಾ ಸಂಘರ್ಷದಲ್ಲಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದರೂ ಇಸ್ರೇಲ್‌ಗೆ ನಿಸ್ಸಂದಿಗ್ಧ ಬೆಂಬಲ ನೀಡುತ್ತಿರುವ ಸರ್ಕಾರದ ನಡೆಯನ್ನು ಸೋನಿಯಾ ಟೀಕಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 10 ಮಿಲಿಯನ್ (ಒಂದು ಕೋಟಿ) ಭಾರತೀಯರು ವಾಸಿಸುತ್ತಿದ್ದಾರೆ. ಅವರ ಹಿತರಕ್ಷಣೆ ಮಾಡಬೇಕಾದರೆ ಭಾರತವು ಸ್ವತಂತ್ರ ಶಕ್ತಿಯಾಗಿ ಕಾಣಿಸಿಕೊಳ್ಳಬೇಕೇ ಹೊರತು ಮತ್ತೊಂದು ದೇಶದ ‘ಪ್ರಾಕ್ಸಿ’ (ಪ್ರತಿನಿಧಿ) ತರಹ ಅಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಅಲ್ಲದೆ, ಜಾಗತಿಕ ದಕ್ಷಿಣದ (Global South) ದೇಶಗಳ ನಾಯಕತ್ವ ವಹಿಸಲು ಬಯಸುವ ಭಾರತ, ಇಂತಹ ತತ್ವದ ವಿಚಾರಗಳಲ್ಲಿ ಮೌನ ವಹಿಸಿದರೆ ಇತರ ದೇಶಗಳು ಭಾರತವನ್ನು ಹೇಗೆ ನಂಬುತ್ತವೆ ಎಂದು ಪ್ರಶ್ನಿಸಿದ್ದಾರೆ. ‘ವಸುಧೈವ ಕುಟುಂಬಕಂ’ ಎಂಬ ಆದರ್ಶ ಕೇವಲ ಘೋಷಣೆಯಾಗಬಾರದು, ನ್ಯಾಯ ಮತ್ತು ಸಂಭಾಷಣೆಗೆ ಭಾರತ ಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ.
