ನವದೆಹಲಿ: ಭಾರತವು ತನ್ನ 77ನೇ ಗಣರಾಜ್ಯೋತ್ಸವವನ್ನು (Republic Day 2026) ಅದ್ಧೂರಿಯಾಗಿ ಆಚರಿಸಲು ಸಜ್ಜಾಗುತ್ತಿದೆ. ಈ ಸಮಯದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) 140ಕ್ಕೂ ಹೆಚ್ಚು ಪುರುಷ ಸಿಬ್ಬಂದಿಗಳ ಬೃಹತ್ ತುಕಡಿಯನ್ನು ಮಹಿಳಾ ಅಧಿಕಾರಿಯೊಬ್ಬರು ಮುನ್ನಡೆಸಲಿದ್ದಾರೆ. ಆ ಮಹಿಳೆಯೇ ಸಿಮ್ರಾನ್ ಬಾಲಾ
ಯಾರು ಈ ಸಿಮ್ರಾನ್ ಬಾಲಾ ?
26 ವರ್ಷದ ಸಿಮ್ರಾನ್ ಬಾಲಾ ಮೂಲತಃ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಎಂಬ ಗ್ರಾಮದವರು. ನಿಯಂತ್ರಣ ರೇಖೆಗೆ (LoC) ಅತ್ಯಂತ ಸಮೀಪವಿರುವ ಈ ಪ್ರದೇಶದಲ್ಲಿ ಬೆಳೆದ ಸಿಮ್ರಾನ್‌ಗೆ ದೇಶಭಕ್ತಿ ಮತ್ತು ಶಿಸ್ತು ರಕ್ತದಲ್ಲೇ ಬಂದಿದೆ. ತಮ್ಮ ಜಿಲ್ಲೆಯಿಂದ ಸಿಆರ್‌ಪಿಎಫ್‌ನಲ್ಲಿ ಅಧಿಕಾರಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಈಗ ದೇಶದ ಅತಿದೊಡ್ಡ ಅರೆಸೈನಿಕ ಪಡೆಯ ಪುರುಷರ ತುಕಡಿಯನ್ನು ಮುನ್ನಡೆಸುವ ಮೂಲಕ ಇಡೀ ದೇಶವೇ ಇವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಮೊದಲ ಪ್ರಯತ್ನದಲ್ಲೇ UPSC ಸಾಧನೆ
ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC CAPF ಪರೀಕ್ಷೆಯನ್ನು ಸಿಮ್ರಾನ್ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಮುಗಿಸಿದ್ದರು. 2023ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್ ಪಡೆಯುವ ಮೂಲಕ, ಆ ವರ್ಷ ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಏಕೈಕ ಮಹಿಳಾ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಿಆರ್‌ಪಿಎಫ್‌ನ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸುವ ಜವಾಬ್ದಾರಿ ಸಿಮ್ರಾನ್‌ಗೆ ಸುಲಭವಾಗಿ ಸಿಕ್ಕಿಲ್ಲ, ಗಣರಾಜ್ಯೋತ್ಸವದ ಕಠಿಣ ಪೂರ್ವಾಭ್ಯಾಸದ (Rehearsals) ಸಮಯದಲ್ಲಿ ಅವರ ಡ್ರಿಲ್ ಪರಿಪೂರ್ಣತೆ, ಅಚಲ ಆತ್ಮವಿಶ್ವಾಸ ಮತ್ತು ಪ್ರಬಲ ಕಮಾಂಡಿಂಗ್ ಶೈಲಿಯನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಅದನ್ನ ಮೆಚ್ಚಿದ್ದಾರೆ. ಹೀಗಾಗಿ ಲಿಂಗಭೇದವಿಲ್ಲದೆ ಕೇವಲ ಸಾಮರ್ಥ್ಯದ ಆಧಾರದ ಮೇಲೆ ಅವರಿಗೆ ಈ ನಾಯಕತ್ವದ ಹೊಣೆಯನ್ನು ವಹಿಸಲಾಗಿದೆ.
ಭಾರತೀಯ ಸೇನಾ ಪಡೆಗಳಲ್ಲಿ ಮಹಿಳೆಯರ ಪಾತ್ರ ಕೇವಲ ಪೂರಕವಾಗಿರದೆ, ನಾಯಕತ್ವದ ಹಂತಕ್ಕೂ ಏರಿದೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆ. 140ಕ್ಕೂ ಹೆಚ್ಚು ಪುರುಷ ಸೈನಿಕರಿಗೆ ಕಮಾಂಡ್ ನೀಡುತ್ತಾ ಸಿಮ್ರಾನ್ ಹೆಜ್ಜೆ ಹಾಕಲಿರುವ ಆ ಕ್ಷಣವು, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ಯುವತಿಯರಿಗೆ ಮತ್ತು ಸಮವಸ್ತ್ರ ಧರಿಸುವ ಕನಸು ಕಾಣುತ್ತಿರುವ ಹೆಣ್ಣುಮಕ್ಕಳಿಗೆ ದೊಡ್ಡ ಸ್ಫೂರ್ತಿಯಾಗಲಿದೆ.
