ಮೋದಿಗೆ ಜೈ ಎಂದ ಶಶಿ ತರೂರ್: ಕಾಂಗ್ರೆಸ್‌ನಲ್ಲಿ ತಲ್ಲಣ.. ಬಿಜೆಪಿಯಲ್ಲಿ ಸಂಚಲನ..!

Befunky collage 2025 03 19t175458.975

ಶಶಿ ತರೂರ್ ಅಪ್ಪಟ ಕಾಂಗ್ರೆಸ್ಸಿಗ, ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ವಿರುದ್ಧವೇ ಸ್ಪರ್ಧೆ ಮಾಡಿದ್ದ ನಾಯಕ. ಇತ್ತೀಚಿನ ಅವರ ಹೇಳಿಕೆಗಳು ಶಶಿ ತರೂರ್, ಬಿಜೆಪಿಯತ್ತ ವಾಲುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟು ಹಾಕಿವೆ. ಇದಕ್ಕೆ ಕಾರಣವಾಗಿರೋದು ಶಶಿ ತರೂರ್ ಅವರ ಒಂದು ಹೇಳಿಕೆ.
ಶಶಿ ತರೂರ್ ಹೇಳಿಕೆ ಏನು..?
2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗ ನಾನು ಅದನ್ನು ಖಂಡಿಸಿದ್ದೆ. ಈ ವಿಷಯದಲ್ಲಿ ಭಾರತ ತಟಸ್ಥ ನೀತಿ ಅನುಸರಿಸುತ್ತಿರುವುದು ತಪ್ಪು ಎಂದು ಹೇಳಿದ್ದೆ. ಭಾರತಕ್ಕೆ ಯಾಕೆ ಅರ್ಥವಾಗುತ್ತಿಲ್ಲ ಎಂದು ನಮ್ಮ ಸಂಸತ್ತಿನಲ್ಲಿಯೇ ಪ್ರಶ್ನೆ ಮಾಡಿದ್ದೆ. ಆದರೆ ನನಗೀಗ ಅರ್ಥವಾಗುತ್ತಿದೆ. ನಾನೊಬ್ಬ ಮೂರ್ಖ ಎನಿಸುತ್ತಿದೆ. ಈಗ ಯಾಕಂದ್ರೆ ಭಾರತದ ಪ್ರಧಾನಿ ಉಕ್ರೇನ್ ಅಧ್ಯಕ್ಷ ಮತ್ತು ರಷ್ಯಾ ಅಧ್ಯಕ್ಷ, ಇಬ್ಬರನ್ನೂ ಎರಡು ವಾರಗಳ ಅಂತರದಲ್ಲಿ ಭೇಟಿ ಮಾಡಿ ಮಾತಾಡಿದ್ದಾರೆ. ಭಾರತದ ಈ ನೀತಿ ಶಾಂತಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಾಂತಿ ಸ್ಥಾಪನೆ ವಿಷಯದಲ್ಲಿ ಭಾರತದ ಸ್ಥಾನಮಾನವೇ ಬದಲಾಗಿದೆ.

ಭಾರತವೇ ಬೆಸ್ಟ್ ಎಂದ ಶಶಿ ತರೂರ್ :
ರಷ್ಯಾ – ಉಕ್ರೇನ್ ಯುದ್ಧ ನೀತಿಯಲ್ಲಿ ಭಾರತವೇ ಬೆಸ್ಟ್ ಎನ್ನುವ ಮೂಲಕ ಶಶಿ ತರೂರ್, ಕಾಂಗ್ರೆಸ್ಸಿಗೆ ಟೆನ್ಷನ್ ಕೊಟ್ಟರೆ, ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದಾರೆ. ಶಶಿ ತರೂರ್ ಕಾಂಗ್ರೆಸ್ ಸಂಸದರಾಗಿದ್ದರೂ, ಕಾಂಗ್ರೆಸ್‌‌‌‌ನಲ್ಲಿ ಇದ್ದೂ ಇಲ್ಲದಂತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನನ್ನ ಅಗತ್ಯ ಇಲ್ಲದೇ ಇರಬಹುದು, ನನಗೂ ಬೇರೆ ಆಯ್ಕೆಗಳಿವೆ ಎನ್ನುವ ಮೂಲಕ ಒಂದು ಕಾಲು ಹೊರಗಿಟ್ಟಿದ್ದಾರೆ. ಅಷ್ಟೇ ಅಲ್ಲ, ಕೇರಳದ ಎಲ್‌ಡಿಎಫ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಹೊಗಳಿದ್ಧಾರೆ. ಇದು ಕಾಂಗ್ರೆಸ್ ಕಣ್ಣು ಕೆಂಪು ಮಾಡಿದೆ. ಆದರೆ ಅದಕ್ಕೆ ಶಶಿ ತರೂರ್ ಡೋಂಟ್ ಕೇರ್ ಅಂತಿದ್ದಾರೆ. ಇತ್ತೀಚೆಗೆ ಶಶಿ ತರೂರ್ ಮಾಡಿರುವ ಚಟುವಟಿಕೆಗಳೆಲ್ಲ ಅದಕ್ಕೆ ಪುಷ್ಠಿ ಕೊಡೋ ರೀತಿಯಲ್ಲೇ ಇವೆ.

ಕಾಂಗ್ರೆಸ್ಸಿಗ ಶಶಿ ತರೂರ್ ಪೊಲಿಟಿಕಲ್ ಗೇಮ್..!
ವಿದೇಶಾಂಗ ಸಚಿವ ಜೈಶಂಕರ್‌ರನ್ನು ಹೊಗಳಿದ್ದರು.ಕಾಂಗ್ರೆಸ್ ಯೋಚನೆ, ನಾಯಕತ್ವ ಬದಲಾಗಬೇಕು ಎಂದಿದ್ದರು.ಕೇರಳದ ಎಡಪಂಥೀಯ ಸರ್ಕಾರವನ್ನೂ ಹೊಗಳಿದ್ದರು.ಇದೀಗ ಪ್ರಧಾನಿ ಮೋದಿಯನ್ನೂ ಹೊಗಳಿದ್ಧಾರೆ.

ಇದನ್ನೆಲ್ಲ ನೋಡುತ್ತಿದ್ದರೆ ಕಾಂಗ್ರೆಸ್‌‌‌ನಿಂದ ಮತ್ತೊಬ್ಬ ಸೀನಿಯರ್ ಲೀಡರ್ ಹೊರ ಹೋಗುವುದಕ್ಕೆ ಸಿದ್ಧವಾಗಿದ್ದಾರೆ ಎನಿಸುತ್ತಿದೆ. ಏಕೆಂದರೆ ಶಶಿ ತರೂರ್, ವೈಯಕ್ತಿಕ ವಿವಾದಗಳನ್ನು ಬಿಟ್ಟರೆ, ಮುತ್ಸದ್ಧಿ ಎಂದೇ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ಅಸಹಾರದ ನಡುವೆಯೂ, ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಇನ್ನು, ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಕಾರಣಕ್ಕಾಗಿ, ಕಾಂಗ್ರೆಸ್‌‌‌ನ ಗಾಂಧಿ ಕುಟುಂಬದವರಿಗೆ ಹಾಗೂ ಗಾಂಧಿ ಕುಟುಂಬದ ಆಪ್ತರಿಗೆ ಬೇಡವಾಗಿದ್ದಾರೆ.
ಇತ್ತ ಬಿಜೆಪಿಗೂ ಕೇರಳದಲ್ಲಿ ಭದ್ರ ನೆಲೆ ಇಲ್ಲ. ಒಂದು ಹಂತದವರೆಗೆ ಮತಗಳಿಕೆ ಹೆಚ್ಚುತ್ತಿದ್ದರೂ, ಗೆಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇರಳಕ್ಕೆ ಒಬ್ಬ ಪ್ರಭಾವಿ ನಾಯಕನ ಅಗತ್ಯವೂ ಇದೆ. ಹೀಗಾಗಿ ಬಿಜೆಪಿ ಕೂಡಾ ಶಶಿ ತರೂರ್ ವಿಷಯದಲ್ಲಿ ಪಾಸಿಟಿವ್ ಆಗಿಯೇ ರಿಯಾಕ್ಟ್ ಮಾಡ್ತಾ ಇದೆ.
ಶಶಿ ತರೂರ್ ಹೇಳಿಕೆಯನ್ನು ಸ್ವಾಗತಿಸಿರುವ ಬಿಜೆಪಿ ನಾಯಕರು, ಮೋದಿಯನ್ನು ಟೀಕಿಸಿದ್ದವರೆಲ್ಲ ಈಗ ಹೊಗಳುತ್ತಿದ್ದಾರೆ. ಕಾಂಗ್ರೆಸ್‌‌‌‌‌‌‌‌ಗೆ ಈಗ ಹೊಸದಾಗಿ ಮೋದಿಯನ್ನು ಟೀಕೆ ಮಾಡುವ ನಾಯಕರು ಬೇಕಾಗಿದ್ದಾರೆ ಎಂದು ವಿಭಿನ್ನವಾಗಿಯೇ ಪ್ರತಿಕ್ರಿಯೆ ಕೊಟ್ಟಿದೆ. ಶಶಿ ತರೂರ್, ಬಿಜೆಪಿಯತ್ತ ವಾಲುತ್ತಿದ್ದಾರಾ ಎಂಬ ಚರ್ಚೆಗಳು ದೆಹಲಿಯಲ್ಲಿ ಜೋರಾಗಿವೆ.

Exit mobile version