ಮದನಪಲ್ಲೆ: ಕೇವಲ ಏಳು ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ, ನೀರಿನ ಡ್ರಮ್‌ನಲ್ಲಿ ಶವ ಬಿಸಾಡಿರುವ ಘಟನೆ ಆಂಧ್ರಪ್ರದೇಶದ ಮದನಪಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರ
ಸಂತ್ರಸ್ತೆ ಬಾಲಕಿಯ ಮನೆಯ ಸಮೀಪವೇ ವಾಸವಾಗಿದ್ದ ಕುಲವರ್ಧನ್ (30) ಎಂಬಾತನೇ ಈ ಘೋರ ಕೃತ್ಯ ಎಸಗಿದ ಕಾಮುಕ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುಲವರ್ಧನ್ ತೀವ್ರ ಮಾದಕ ವ್ಯಸನಿ ಹಾಗೂ ಕುಡುಕನಾಗಿದ್ದ. ಸೋಮವಾರ ಸಂಜೆ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿದ ಈತ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಸಾಕ್ಷ್ಯ ನಾಶಪಡಿಸಲು ಬಾಲಕಿಯನ್ನು ಮನೆಯಲ್ಲಿದ್ದ ನೀರಿನ ಡ್ರಮ್ಮಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಆತಂಕಕಾರಿ ವಿಷಯವೆಂದರೆ, ಇಡೀ ರಾತ್ರಿ ಬಾಲಕಿಯ ಶವವನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಮಲಗಿದ್ದಾನೆ.
ಸೋಮವಾರ ರಾತ್ರಿ ಬಾಲಕಿ ನಾಪತ್ತೆಯಾದ ದೂರು ಬಂದ ತಕ್ಷಣ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕೆಗೊಳಗಾದ ಪೊಲೀಸರು ರಾತ್ರಿ 1:30ಕ್ಕೆ ಆರೋಪಿ ಕುಲವರ್ಧನ್ ಮನೆಗೆ ಹೋಗಿದ್ದರು. ಆದರೆ, ಆರೋಪಿಯು ಕಿಟಕಿಯ ಪಕ್ಕದಲ್ಲಿ ಮಲಗಿರುವುದನ್ನು ಕಂಡು ಪೊಲೀಸರು ವಾಪಸ್ ಬಂದಿದ್ದಾರೆ. ಒಂದು ವೇಳೆ ಅಂದೇ ರಾತ್ರಿ ಬಾಗಿಲು ಮುರಿದು ತಪಾಸಣೆ ನಡೆಸಿದ್ದರೆ, ಬಾಲಕಿಯ ಜೀವ ಉಳಿಯುತ್ತಿತ್ತು ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮರುದಿನ ಬೆಳಿಗ್ಗೆ ತಪಾಸಣೆ ನಡೆಸಿದಾಗ ಡ್ರಮ್ಮಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮದನಪಲ್ಲೆ ಪಟ್ಟಣ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಸಾವಿರಾರು ಜನರು ಮದನಪಲ್ಲೆ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಉದ್ವಿಗ್ನ ವಾತಾವರಣದ ನಡುವೆಯೇ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಬರ್ಬರ ಕೃತ್ಯದ ಬೆನ್ನಲ್ಲೇ ಗ್ರಾಮದ ಸಮೀಪವಿರುವ ನೀರಿನ ಟ್ಯಾಂಕ್ ಬಳಿ ಮತ್ತೊಂದು ಅನಾಮಧೇಯ ಶವ ಪತ್ತೆಯಾಗಿದೆ. ಈ ಶವವು ಕೃತ್ಯ ಎಸಗಿದ ಆರೋಪಿ ಕುಲವರ್ಧನ್‌ನದ್ದೇ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪ್ರಾಣಕ್ಕೆ ಹೆದರಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಆಕ್ರೋಶಗೊಂಡವರಿಂದ ಹತ್ಯೆಯಾಗಿರಬಹುದು ಎಂಬ ಸಂಶಯಗಳೂ ವ್ಯಕ್ತವಾಗುತ್ತಿವೆ. ಸದ್ಯ ಪೊಲೀಸರು ಈ ಕುರಿತು ಅಧಿಕೃತ ತನಿಖೆ ನಡೆಸುತ್ತಿದ್ದಾರೆ.
