ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಸಾವನ್ನಪ್ಪಿದ 45 ಭಾರತೀಯ ಮೆಕ್ಕಾ–ಮದೀನಾ ಉಮ್ರಾ ಯಾತ್ರಿಕರ ಶವಗಳನ್ನು ಭಾರತಕ್ಕೆ ತರಲಾಗುವುದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಸೌದಿ ಸರ್ಕಾರದ ಕಠಿಣ ಕಾನೂನುಗಳು ಮತ್ತು ಯಾತ್ರಿಕರು ಹೊರಡುವ ಮೊದಲು ಸಹಿ ಮಾಡುವ ಘೋಷಣಾ ಪತ್ರಗಳ ಪ್ರಕಾರ, ಯಾತ್ರೆಯ ಸಂದರ್ಭದಲ್ಲಿ ಸೌದಿ ನೆಲದಲ್ಲಿ ಮರಣವಾದರೆ ಅಂತ್ಯಸಂಸ್ಕಾರ ಅಲ್ಲೀಗೇ ನಡೆಯಬೇಕು ಎಂಬ ನಿಯಮ ಜಾರಿಗೆ ಬರುತ್ತದೆ.
ದುರಂತ ಹೇಗೆ ಸಂಭವಿಸಿತು?
ಮೆಕ್ಕಾದಿಂದ ಮದೀನಾಕ್ಕೆ ಹೊರಟಿದ್ದ ಭಾರತೀಯ ಯಾತ್ರಿಕರ ಬಸ್ ಮುಹ್ರಾಸ್ ಪ್ರದೇಶದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಡೀಸೆಲ್ ಟ್ಯಾಂಕರ್ ಹಿಂದಿನಿಂದ ಬಸ್‌ಗೆ ಭೀಕರ ಡಿಕ್ಕಿ ಹೊಡೆದಿತು. ಭಾರತೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 1.30ರ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ ಬಸ್ ಬೆಂಕಿಗೆ ಆಹುತಿಯಾಗಿತ್ತು.
ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ 45 ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ಬದುಕುಳಿದ ಏಕೈಕ ವ್ಯಕ್ತಿ ಮೊಹಮ್ಮದ್ ಅಬ್ದುಲ್ ಶೋಯೆಬ್ (24), ಚಾಲಕನ ಪಕ್ಕದಲ್ಲಿ ಕುಳಿತಿದ್ದ ಕಾರಣ ಬದುಕುಳಿದಿದ್ದಾರೆ. ಅವರಿಗೆ ಸೌದಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ 18 ಮಹಿಳೆಯರು, 17 ಪುರುಷರು ಮತ್ತು 10 ಮಕ್ಕಳು ಸೇರಿದ್ದಾರೆ.
ಶವಗಳನ್ನು ಭಾರತಕ್ಕೆ ತರಲಾಗುವುದಿಲ್ಲ: ಕಾರಣವೇನು?
ಮೃತರ ಶರೀರಗಳನ್ನು ಭಾರತಕ್ಕೆ ತರದೆ, ಸೌದಿ ಅರೇಬಿಯಾದಲ್ಲೇ ಅಂತ್ಯಸಂಸ್ಕಾರ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದ ಹಿಂದೆ ಹಲವಾರು ಪ್ರಾಮುಖ್ಯ ಕಾರಣಗಳಿವೆ.
- ಧಾರ್ಮಿಕ ನಿಯಮ: ಉಮ್ರಾ ಯಾತ್ರೆಗೆ ಹೋಗುವ ಯಾತ್ರಿಕರು ಮುನ್ನೆಚ್ಚರೆಯಾಗಿ ಸಹಿ ಹಾಕುವ ಘೋಷಣಾ ಪತ್ರದಲ್ಲಿ, ಸೌದಿ ಅರೇಬಿಯಾದ ಪವಿತ್ರ ನಗರಗಳಲ್ಲಿ (ಮೆಕ್ಕಾ ಮತ್ತು ಮದೀನಾ) ಮರಣ ಹೊಂದಿದ್ದ, ಅವರನ್ನು ಅಲ್ಲೇ ಸಮಾಧಿ ಮಾಡಲಾಗುತ್ತದೆ ಎಂಬ ನಿಯಮ ಇದೆ.
- ಶರೀರಗಳ ಸ್ಥಿತಿ: ಅಗ್ನಿಪ್ರಕೋಪದಿಂದಾಗಿ ಶರೀರಗಳುಗುರುತಿಸಲಾಗದಷ್ಟುಸುಟ್ಟುಹೋಗಿದ್ದು, ಸಾಗಣೆ ಸಾಧ್ಯವಿರುವ ಸ್ಥಿತಿಯಲ್ಲಿಲ್ಲ. ಗುರುತಿಸಲು DNA ಪರೀಕ್ಷೆ ಅಗತ್ಯವಿದೆ.
- ಕಾನೂನು ಸಂಕೀರ್ಣತೆ: ಸೌದಿ ಅರೇಬಿಯಾದಲ್ಲಿ ಶವಗಳನ್ನು ದೇಶದ ಹೊರಗೆ ಕಳುಹಿಸುವ ಪ್ರಕ್ರಿಯೆ ಬಹಳ ಕಷ್ಟವಾಗಿದ್ದು, ಇದರಿಂದ ಹಲವಾರು ತಿಂಗಳು ತಡವಾಗಬಹುದು. ಇಸ್ಲಾಮಿ ಸಂಪ್ರದಾಯದಂತೆ ಶೀಘ್ರ ಅಂತ್ಯಸಂಸ್ಕಾರವೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.
ಸೌದಿ ಸರ್ಕಾರದಿಂದ ಪರಿಹಾರ ಸಿಗದಿರುವ ಕಾರಣ
ಸೌದಿಯಲ್ಲಿ ರಸ್ತೆ ಅಪಘಾತಗಳಿಗೆ ಸರ್ಕಾರ ನೇರ ಪರಿಹಾರ ನೀಡುವುದಿಲ್ಲ. ಪರಿಹಾರ ಪಡೆಯಲು, ಪೋಲೀಸ್ ತನಿಖೆಯಲ್ಲಿ ಟ್ಯಾಂಕರ್ ಚಾಲಕನ ತಪ್ಪು ಸಾಬೀತಾಗಬೇಕು. ನಂತರ ಕುಟುಂಬವು ಕಾನೂನು ಮೂಲಕ ಕೇಸ್ ಹಾಕಬೇಕು. ಈ ಪ್ರಕ್ರಿಯೆ ತಿಂಗಳುಗಳು–ವರ್ಷಗಳಿಗೂ ಸಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಸಾವನ್ನಪ್ಪಿದ ಭಾರತೀಯ ಕುಟುಂಬಗಳು ತಕ್ಷಣ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ.
ತೆಲಂಗಾಣ ಸರ್ಕಾರದ ನಿರ್ಧಾರ
ಈ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಬಹುತೇಕರು ತೆಲಂಗಾಣ ಮತ್ತು ಹೈದರಾಬಾದ್ ಮೂಲದವರು.
ತೆಲಂಗಾಣ ಸಚಿವ ಸಂಪುಟ ತುರ್ತು ಸಭೆ ನಡೆಸಿದ್ದು, ಶವಗಳನ್ನು ಸೌದಿಯಲ್ಲೇ ಧಾರ್ಮಿಕ ವಿಧಿಗಳ ಪ್ರಕಾರ ಅಂತ್ಯಸಂಸ್ಕಾರ ಮಾಡುವ ನಿರ್ಧರಿಸಿದೆ. ಪ್ರತಿ ಕುಟುಂಬದಿಂದ ಇಬ್ಬರನ್ನು ಸೌದಿಗೆ ಕಳುಹಿಸಿ ಅಂತಿಮ ವಿಧಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಿದೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದೆ.
ಯಾತ್ರಿಕರ ಗುಂಪಿನ ವಿವರ
ಹೈದರಾಬಾದ್‌ನಿಂದ 54 ಯಾತ್ರಿಕರು ನವೆಂಬರ್ 9 ರಂದು ಉಮ್ರಾ ಯಾತ್ರೆಗೆ ಸೌದಿಗೆ ಹೊರಟಿದ್ದರು. 46 ಜನ ಬಸ್‌ನಲ್ಲಿ ಇದ್ದವರು ಅಪಘಾತದಿಂದ ಸಾವನ್ನಪ್ಪಿದ್ದಾರೆ. 4 ಜನ ಬೇರೆ ವಾಹನದಲ್ಲಿ ಪ್ರಯಾಣಿಸುತ್ತಿದ್ದರಿಂದ ಬದುಕುಳಿದಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ 18 ಸದಸ್ಯರು ಇದ್ದರು ಎಂದು ಹೇಳಲಾಗಿದೆ. ಯಾತ್ರಿಕರು ನವೆಂಬರ್ 23 ರಂದು ಭಾರತಕ್ಕೆ ಮರಳಬೇಕಿತ್ತು.
ರಾಯಭಾರಿ ಕಚೇರಿ ಮತ್ತು ಸರ್ಕಾರದ ಕ್ರಮಗಳು
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ತೆಲಂಗಾಣ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು,
ಮೃತರ ಗುರುತಿಸುವಿಕೆ, ದಾಖಲೆಗಳು, ಕುಟುಂಬ ಸದಸ್ಯರ ಪ್ರಯಾಣ ಮತ್ತು ವೀಸಾ ಇತ್ಯಾದಿ ಔಪಚಾರಿಕತೆಗಳಲ್ಲಿ ಸಹಕಾರ ಒದಗಿಸಲಾಗುತ್ತಿದೆ.
