ಚೆನ್ನೈ: ತಮಿಳುನಾಡಿನ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ವೊಂದು ಬೈಕ್ ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ 11 ತಿಂಗಳ ಮಗು ಹಾಗೂ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಹಾಗೂ ಬೈಕ್ ಸವಾರರು ಸೇರಿ ಒಟ್ಟು ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ವಿವರ
ಇಂದು (ಮಾರ್ಚ್ 20) ಬೆಳಿಗ್ಗೆ ಈ ಘಟನೆ ನಡೆದಿದ್ದು, ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ತಮಿಳುನಾಡು ಸರ್ಕಾರಿ ಬಸ್ ಈರೋಡ್‌ನಿಂದ ಸೇಲಂ ಕಡೆಗೆ ವೇಗವಾಗಿ ಚಲಿಸುತ್ತಿತ್ತು. ಉತ್ತಮಸೋಲಪುರಂ ಸಮೀಪಿಸುತ್ತಿದ್ದಂತೆ ಬಸ್‌ನ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಬಸ್ ಮುಂಭಾಗದಲ್ಲಿದ್ದ ಪಿಕಪ್ ವ್ಯಾನ್ ಮತ್ತು ಬೈಕ್‌ಗೆ ಸರಣಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಒಂದೇ ಕುಟುಂಬದ ಆರು ಬಲಿ
ಪಿಕಪ್ ವ್ಯಾನ್‌ನಲ್ಲಿ ನೈಕಾರಪಟ್ಟಿಯ ಒಂದೇ ಕುಟುಂಬದ 11 ಮಂದಿ ದೇವಸ್ಥಾನದ ಉತ್ಸವದಲ್ಲಿ ಭಾಗವಹಿಸಲು ಕಲ್ಪರಪಟ್ಟಿಗೆ ತೆರಳುತ್ತಿದ್ದರು. ಈ ದುರ್ಘಟನೆಯಲ್ಲಿ 60 ವರ್ಷದ ಸೆಲ್ವರಾಜ್, ಅವರ ಮೊಮ್ಮಕ್ಕಳಾದ 11 ತಿಂಗಳ ಹಸುಗೂಸು ಜೀವಿಕಾ ಮತ್ತು 5 ವರ್ಷದ ನಿತೀಶ್ಕಾ, ಮೂರು ತಿಂಗಳ ಗರ್ಭಿಣಿಯಾಗಿದ್ದ ಸೊಸೆ ಸತ್ಯ (25) ಹಾಗೂ ಸಂಬಂಧಿಕರಾದ ಅಮುತಾ ಮತ್ತು ಮುರುಗನ್ ಮೃತಪಟ್ಟಿದ್ದಾರೆ. ವ್ಯಾನ್ ಚಲಾಯಿಸುತ್ತಿದ್ದ ಸೆಲ್ವರಾಜ್ ಅವರ ಪುತ್ರ ಮೇಘನಾಥನ್ ಸೇರಿದಂತೆ ಉಳಿದವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮತ್ತೊಂದೆಡೆ, ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಪುತ್ತೂರು ಸಮೀಪದ ಸಂತನಕರಣಕಾಡು ನಿವಾಸಿಗಳಾದ ಎಸ್. ಮಣಿಕಂಠನ್ (21) ಮತ್ತು ಅವರ ತಾಯಿ ಎಸ್. ಇರುಸಾಯಿ (50) ಕೂಡ ಬಸ್ ಡಿಕ್ಕಿಯಿಂದಾಗಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
