ಉತ್ತರ ಪ್ರದೇಶ: ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆಯೊಬ್ಬಳನ್ನು ಆಕೆಯ ಸಂಗಾತಿಯೇ ಭೀಕರವಾಗಿ ಕೊಲೆ ಮಾಡಿದ್ದು, ಆಕೆಯ ಶಿರಚ್ಛೇದ ಮಾಡಿ ಅರಣ್ಯ ಪ್ರದೇಶದಲ್ಲಿ ಎಸೆದಿರುವ ಘಟನೆ ಉತ್ತರ ಪ್ರದೇಶ ಮತ್ತು ಹರಿಯಾಣ ಗಡಿಯಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಆರೋಪಿಯು ಮತ್ತೊಂದು ಮದುವೆಗೆ ಸಿದ್ಧತೆ ನಡೆಸಲು ಮನೆಗೆ ಮರಳಿದ್ದನು. ಹರಿಯಾಣ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಸಂತ್ರಸ್ತೆಯನ್ನು ಉಮಾ ಎಂದು ಗುರುತಿಸಲಾಗಿದೆ. ಈಕೆ ಈಗಾಗಲೇ 13 ವರ್ಷದ ಮಗುವಿನ ತಾಯಿಯಾಗಿದ್ದು, ಉಮಾ ಸುಮಾರು 15 ವರ್ಷಗಳ ಹಿಂದೆ ಸಹಾರನ್‌ಪುರದ ನಿವಾಸಿ ಜಾನಿ ಎಂಬುವವರೊಂದಿಗೆ ವಿವಾಹವಾಗಿದ್ದಳು. ಆದರೆ, ಅವರ ಸಂಬಂಧ ಮುರಿದುಬಿದ್ದು, ಎರಡು ವರ್ಷಗಳ ಹಿಂದೆ ಇಬ್ಬರು ವಿಚ್ಛೇದನ ಪಡೆದಿದ್ದರು.
ವಿಚ್ಛೇದನದ ನಂತರ, ಉಮಾ ಕಳೆದ ಎರಡು ವರ್ಷಗಳಿಂದ ಟ್ಯಾಕ್ಸಿ ಚಾಲಕನಾದ ಆರೋಪಿ ಬಿಲಾಲ್ (ಫರ್ಕಾನ್ ಅಲಿಯಾಸ್ ಬಿಲಾಲ್) ಜೊತೆ ಲಿವ್-ಇನ್ ಸಂಬಂಧದಲ್ಲಿದ್ದಳು. ಸಹಾರನ್‌ಪುರದ ನಕುರ್ ಪೊಲೀಸ್ ಠಾಣೆ ವ್ಯಾಪ್ತಿಯ ತಿಡೋಲಿ ಗ್ರಾಮದ ನಿವಾಸಿಯಾದ ಬಿಲಾಲ್‌ಗೆ ಈಗಾಗಲೇ ಬೇರೊಂದು ಹುಡುಗಿಯ ಜೊತೆ ನಿಶ್ಚಿತಾರ್ಥವಾಗಿತ್ತು. ಇದರೊಟ್ಟಿಗೆ ಉಮಾ ಜೊತೆಗಿನ ಸಂಬಂಧವನ್ನ ಕಡಿದುಕೊಳ್ಳಲು ಬಯಸಿದ್ದ. ಆದರೆ, ಉಮಾ ತನ್ನನ್ನೇ ಮದುವೆಯಾಗುವಂತೆ ಬಿಲಾಲ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಳು. ಅವನ ನಿಶ್ಚಿತಾರ್ಥವನ್ನು ವಿರೋಧಿ, ತಮ್ಮ ನಡುವಿನ ಸಂಬಂಧವನ್ನ ಬಿಲಾಲ್ ಕುಟುಂಬಕ್ಕೆ ತಿಳಿಸುತ್ತಾಳೆ. ಇದರಿಂದ ತನ್ನ ಮದುವೆ ಹಾಳಾಗುತ್ತದೆ ಎಂಬ ಭಯದಿಂದ ಬಿಲಾಲ್ ಈ ಭೀಕರರ ಕೊಲೆ ಮಾಡಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಡಿಸೆಂಬರ್ 7 ರಂದು, ಹರಿಯಾಣದ ಯಮುನಾನಗರ ಪೊಲೀಸರು ಪೌಂಟಾ ಸಾಹಿಬ್ ಹೆದ್ದಾರಿಯ ಪ್ರತಾಪ್ ನಗರ ಪೊಲೀಸ್ ಠಾಣೆ ಪ್ರದೇಶದ ಹೊಲದಿಂದ ಮಹಿಳೆಯ ತಲೆ ಇಲ್ಲದ, ಕೊಳೆತ ಶವವನ್ನು ವಶಪಡಿಸಿಕೊಂಡರು. ಶವವು ಬೆತ್ತಲೆಯಾಗಿದ್ದ ಕಾರಣ, ಪೂರ್ವಯೋಜಿತ ಕೊಲೆ ಎಂದು ಪೊಲೀಸರು ತಿಳಿಸಿದರು.
ಶವ ಪತ್ತೆಯಾದ ತಕ್ಷಣ, ಪೊಲೀಸ್ ವರಿಷ್ಠಾಧಿಕಾರಿ ಕಮಲ್‌ದೀಪ್ ಗೋಯಲ್ ಅವರು ಡಿಎಸ್‌ಪಿ ರಜತ್ ಗುಲಿಯಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದರು. ಮಹಿಳೆಯನ್ನು ಗುರುತಿಸುವುದು ದೊಡ್ಡ ಸವಾಲಾಗಿತ್ತು, ಏಕೆಂದರೆ ನೆರೆಯ ರಾಜ್ಯಗಳಾದ ಹಿಮಾಚಲ ಪ್ರದೇಶ, ಚಂಡೀಗಢ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಯಾವುದೇ ಕಾಣೆಯಾದ ವರದಿಗಳು ಹೊಂದಿಕೆಯಾಗಲಿಲ್ಲ.
ಆರು ದಿನಗಳ ನಂತರ, ತನಿಖಾಧಿಕಾರಿಗಳು ಹತ್ತಿಕುಂಡ್ ಬ್ಯಾರೇಜ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಮುಖ ಸುಳಿವು ಸಿಕ್ಕಿತು. ಈ ಆಧಾರದ ಮೇಲೆ, ಪೊಲೀಸರು ಬಿಲಾಲ್‌ನನ್ನು ಬಂಧಿಸಿದರು.
ವಿಚಾರಣೆ ವೇಳೆ ಬಿಲಾಲ್, ಡಿಸೆಂಬರ್ 6 ರ ರಾತ್ರಿ ಉಮಾಳನ್ನು ಹಿಮಾಚಲ ಪ್ರದೇಶಕ್ಕೆ ಹೋಗುವ ನೆಪದಲ್ಲಿ ಸಹಾರನ್‌ಪುರದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಅವರು ಪವೊಂಟಾ ಸಾಹಿಬ್ ತಲುಪಿ ವಸತಿಗಾಗಿ ಹುಡುಕಿದ ನಂತರ, ಬಹದ್ದೂರ್‌ಪುರ ಗ್ರಾಮದ ಬಳಿ ಕಾರಿನೊಳಗೆ ಅವಳನ್ನು ಕೊಲೆ ಮಾಡಿದ್ದಾನೆ.
ಅವಳ ಗುರುತನ್ನು ಮರೆಮಾಚಲು, ಆತ ಶವದ ಶಿರಚ್ಛೇದ ಮಾಡಿ, ಬಟ್ಟೆಗಳನ್ನು ತೆಗೆದು, ಮುಖ್ಯ ಪವೊಂಟಾ ಸಾಹಿಬ್ ರಸ್ತೆಯಿಂದ ಸುಮಾರು 20 ಮೀಟರ್ ದೂರದಲ್ಲಿ ಎಸೆದಿದ್ದಾನೆ. ಶವವು ಮುಂಡದಿಂದ ಬೇರ್ಪಟ್ಟಿತ್ತು ಮತ್ತುದೇಹದ ಮೇಲೆ ಒಳುಡುಪು ಬಿಟ್ಟು ಬೇರಾವ ಬಟ್ಟೆಯೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ, ಬಿಲಾಲ್ ಸಹಾರನ್‌ಪುರದಲ್ಲಿರುವ ತನ್ನ ಮನೆಗೆ ಮರಳಿದ್ದನು. ಅಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ಶಾಪಿಂಗ್ ಮಾಡಿ ಮದುವೆಗೆ ಸಿದ್ದತೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
