ಶಬರಿಮಲೆಯಲ್ಲಿ ಹರಿದು ಬಂದ ಭಕ್ತಸಾಗರ: ನ. 24ರವರೆಗೆ ದಿನಕ್ಕೆ 5 ಸಾವಿರ ಭಕ್ತರಿಗೆ ಮಾತ್ರ ಅನುಮತಿ

Untitled design 2025 11 20T140342.371

ಪ್ರತಿ ವರ್ಷದಂತೆ ಈ ಬಾರಿಯೂ ಕೇರಳದ ಪವಿತ್ರ ಶಬರಿಮಲೆ ಐಯಪ್ಪ ಸನ್ನಿಧಿಗೆ ಲಕ್ಷಗಟ್ಟಲೆ ಭಕ್ತರು ಧಾವಿಸುತ್ತಿದ್ದಾರೆ. ಮಂಡಲ-ಮಕರವಿಳಕ್ಕು ಋತುವಿನಲ್ಲಿ ದಕ್ಷಿಣ ಭಾರತದಾದ್ಯಂತದಿಂದ “ಸ್ವಾಮಿಯೇ ಶರಣಂ ಅಯ್ಯಪ್ಪ” ಘೋಷ ಮೊಳಗುತ್ತಿದೆ. ಆದರೆ ಈ ಬಾರಿ ಭಕ್ತರ ಸಂಖ್ಯೆ ಅಂದಾಜು ಮೀರಿ ದಾಖಲೆ ಬರೆಯುತ್ತಿದ್ದಂತೆಯೇ ಆಡಳಿತ ವ್ಯವಸ್ಥೆಯ ಮೇಲೆ ಅಪಾರ ಒತ್ತಡ ಎದುರಾಗಿದೆ. ಇದರಿಂದಾಗಿ ತಿರುವಾಂಕೂರು ದೇವಸ್ವಂ ಬೋರ್ಡ್ ಭಕ್ತರ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

ಭಕ್ತರನ್ನು ನಿಯಂತ್ರಿಸಲು ಕೇರಳ ಹೈಕೋರ್ಟ್ ಮಧ್ಯ ಪ್ರವೇಶಿಸಿದೆ. ನವೆಂಬರ್‌ 15ರಿಂದ ಆರಂಭವಾದ ಮಂಡಲ ಪೂಜಾ ಕಾಲದಲ್ಲಿ ಈಗಾಗಲೇ ದಿನನಿತ್ಯ 80,000ಕ್ಕೂ ಅಧಿಕ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಆದರೆ ಮಕರವಿಳಕ್ಕಿನ ದಿನಗಳು ಸಮೀಪಿಸುತ್ತಿದ್ದಂತೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಮನಗಂಡ ಹೈಕೋರ್ಟ್, ಸ್ಪಾಟ್ ಬುಕಿಂಗ್‌ಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.

ಕೋರ್ಟ್ ನೀಡಿರುವ ಮಾರ್ಗಸೂಚಿಯಂತೆ ನವೆಂಬರ್ 24 ರವರೆಗೆ ದಿನಕ್ಕೆ ಕೇವಲ 5,000 ಭಕ್ತರಿಗೆ ಮಾತ್ರ ಸ್ಪಾಟ್ ಬುಕಿಂಗ್ ಅವಕಾಶ ನೀಡಲಾಗುತ್ತಿದೆ. ಇದರೊಂದಿಗೆ ಪಂಪಾ ಮತ್ತು ಚಂದನಕುಡಂ ಸೇರಿದಂತೆ ಮೂರು ಪ್ರಮುಖ ಸ್ಥಳಗಳಲ್ಲಿದ್ದ ಸ್ಪಾಟ್ ಬುಕಿಂಗ್ ಕೌಂಟರ್‌ಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈಗ ಕೇವಲ ನಿಲಕ್ಕಲ್ ಮತ್ತು ವಂಡಿಪೆರಿಯಾರ್ ಎಂಬ ಎರಡೇ ಕೇಂದ್ರಗಳಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯ ಇರುತ್ತದೆ.

ಈ ನಿರ್ಧಾರದ ಹಿನ್ನೆಲೆ ಏನು?

ಹೈಕೋರ್ಟ್ ಹೇಳಿರುವಂತೆ, ಶಬರಿಮಲೆಯ ಸೀಮಿತ ಮೂಲಸೌಕರ್ಯ ಮತ್ತು ಪರಿಸರದ ಸಾಮರ್ಥ್ಯ ಇದಕ್ಕಿಂತ ಹೆಚ್ಚಿನ ಭಕ್ತರನ್ನು ಒಳಗೊಳ್ಳಲು ಸಾಧ್ಯವಿಲ್ಲ. ಅರಣ್ಯ ಪ್ರದೇಶದಲ್ಲಿರುವ ಸನ್ನಿಧಾನಕ್ಕೆ ತಲುಪುವ ಏಕೈಕ ಮಾರ್ಗವಾದ 18 ಪವಿತ್ರ ಮೆಟ್ಟಿಲುಗಳು, ಪಂಪಾ ನದಿ ತೀರ, ತಿರುವಂಕೂರು ಕಾಡು  ಎಲ್ಲವೂ ಒಂದೇ ಸಮಯದಲ್ಲಿ ಲಕ್ಷಾಂತರ ಜನರ ಒತ್ತಡಕ್ಕೆ ಒಳಗಾಗುತ್ತವೆ. ಕಳೆದ ವರ್ಷಗಳಲ್ಲಿ ಸಂಭವಿಸಿದ ದುರಂತಗಳು ಇನ್ನೂ ನೆನಪಿನಲ್ಲಿವೆ. ಇನ್ನು ಭದ್ರತೆ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಕರ್ಯ, ತ್ಯಾಜ್ಯ ನಿರ್ವಹಣೆ ಎಲ್ಲದರಲ್ಲೂ ತೀವ್ರ ಕೊರತೆ ಎದುರಾಗುತ್ತಿದೆ ಎಂದು ತಿಳಿಸಿದೆ.

ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಂಡರೂ ಸಾಲದು, ಸ್ಪಾಟ್‌ನಲ್ಲಿ ಪಾಸ್ ಪಡೆಯಬೇಕೆಂದು ದೂರದ ರಾಜ್ಯಗಳಿಂದ ಬಂದ ಲಕ್ಷಾಂತರ ಭಕ್ತರು ಈಗ ದಿಕ್ಕು ತೋಚದೇ ನಿಲಕ್ಕಲ್-ವಂಡಿಪೆರಿಯಾರ್ ಕೇಂದ್ರಗಳ ಬಳಿ ದೀರ್ಘ ಸರತಿಯಲ್ಲಿ ನಿಂತಿದ್ದಾರೆ. ಕೆಲವರು ರಾತ್ರಿಯಿಡೀ ಕಾಯುತ್ತಾರೆ. ಆದರೂ ಪಾಸ್ ಸಿಗದೇ ಮರಳುತ್ತಿದ್ದಾರೆ.

ದೇವಸ್ವಂ ಬೋರ್ಡ್ ಈಗಾಗಲೇ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಬಲಪಡಿಸಿದೆ. ಆದರೂ ಸ್ಪಾಟ್ ಬುಕಿಂಗ್‌ಗೆ ಆಸೆಪಡುವವರು ತೀವ್ರ ನಿರಾಶೆ ಅನುಭವಿಸುತ್ತಿದ್ದಾರೆ. ಮಕರಜ್ಯೋತಿ ದಿನ ಸಮೀಪಿಸುತ್ತಿದ್ದಂತೆ ಈ ಒತ್ತಡ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಆದ್ದರಿಂದ ಹೈಕೋರ್ಟ್ ಈಗಾಗಲೇ ಮುಂದಿನ ವಿಚಾರಣೆಯಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಚರ್ಚಿಸುವ ಸಾಧ್ಯತೆ ಇದೆ.

Exit mobile version