ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಬಿಗಿಗೊಳಿಸಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ದೊಡ್ಡ ಅಡಚಣೆ ಉಂಟಾಗುವ ಭಯ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಚೀನಾಕ್ಕೆ ದೊಡ್ಡ ರಿಲೀಫ್ ನೀಡಿದ್ದು ರಷ್ಯಾ.
ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಅವರು ಬುಧವಾರ ಅಧಿಕೃತವಾಗಿ ಘೋಷಿಸಿದ್ದು, ಏಷ್ಯಾದ ಅತಿದೊಡ್ಡ ಆರ್ಥಿಕತೆಗಳಾದ ಭಾರತ ಮತ್ತು ಚೀನಾಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು. ಫೆಬ್ರವರಿ 2026ರಲ್ಲಿ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಸಿದ ದೇಶ ರಷ್ಯಾ ಆಗಿದ್ದು, ಈಗ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ನಿರ್ಧಾರ ಭಾರತದ ತೈಲ ಭದ್ರತೆಗೆ ದೊಡ್ಡ ಬೂಸ್ಟ್ ನೀಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಬಿಗ್ ಟ್ವಿಸ್ಟ್ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸಿದೆ. IRGC ನೌಕಾ ಅಧಿಕಾರಿ ಮೊಹಮ್ಮದ್ ಅಕ್ಬರ್‌ಜಾದೆ ಅವರು “ಈ ಮಾರ್ಗದಲ್ಲಿ ಬರುವ ಯಾವುದೇ ಹಡಗುಗಳನ್ನು ಕ್ಷಿಪಣಿ ಅಥವಾ ಡ್ರೋನ್‌ಗಳ ಮೂಲಕ ಟಾರ್ಗೆಟ್ ಮಾಡಬಹುದು” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರಪಂಚದ 20-25% ಕಚ್ಚಾ ತೈಲ ಸಾಗಾಣಿಕೆಯಾಗುವ ಈ ಮಾರ್ಗದಲ್ಲಿ ಈ ಬೆದರಿಕೆಯಿಂದಾಗಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ $80 ಗಡಿ ದಾಟಿದೆ.
ಅಮೆರಿಕದ ಕೌಂಟರ್ ಮೂವ್ ಇರಾನ್‌ನ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೈಲ ಟ್ಯಾಂಕರ್‌ಗಳ ರಕ್ಷಣೆಗಾಗಿ ತಮ್ಮ ನೌಕಾಪಡೆಯನ್ನು ಕಳುಹಿಸುವುದಾಗಿ ಘೋಷಿಸಿದ್ದಾರೆ. “ಈ ಮಾರ್ಗದಲ್ಲಿ ಸರಕು ಸಾಗಣೆಗೆ ಯಾರೇ ಅಡ್ಡಿಪಡಿಸಿದರೂ ನಾವು ಸುಮ್ಮನಿರುವುದಿಲ್ಲ” ಎಂದು ವಾಷಿಂಗ್ಟನ್ ಖಡಕ್ ಎಚ್ಚರಿಕೆ ನೀಡಿದೆ. ಆದರೂ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಮಿಲಿಟರಿ ದಾಳಿಗಳಿಂದಾಗಿ ಹಲವು ಸರಕು ಹಡಗುಗಳ ಓಡಾಟಕ್ಕೆ ಭಾರಿ ಅಡಚಣೆ ಉಂಟಾಗಿದೆ.
ಭಾರತಕ್ಕೆ ರಷ್ಯಾದಿಂದ ಪ್ರಾಣವಾಯು ಭಾರತಕ್ಕೆ ಪ್ರತಿದಿನ ಸುಮಾರು 2.5 ರಿಂದ 2.7 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಹಾರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಬರುವ ಪೂರೈಕೆಗೆ ಈಗ ಕಂಟಕ ಎದುರಾಗಿದೆ. ಈ ಸಂದರ್ಭದಲ್ಲಿ ರಷ್ಯಾ ತನ್ನ ಪೂರೈಕೆಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿರುವುದು ಭಾರತದ ತೈಲ ಭದ್ರತೆಗೆ ದೊಡ್ಡ ರಿಲೀಫ್ ಆಗಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳ ದಿಢೀರ್ ಏರಿಕೆಯ ಅಪಾಯ ಸದ್ಯಕ್ಕೆ ತಪ್ಪಿದೆ.
