ಪಾಟ್ನಾ, ನವೆಂಬರ್ 16: ಬಿಹಾರದ ರಾಜಕೀಯ ಕ್ಷೇತ್ರದಲ್ಲಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಪಕ್ಷಕ್ಕೆ ಭಾರೀ ಆಘಾತವೊಂದು ಬಂದಿದೆ. ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಚುನಾವಣಾ ಸೋಲಿನ ನಂತರ ಪಕ್ಷ ಹಾಗೂ ಕುಟುಂಬದಿಂದ ಹೊರಬೀಳುವ ನಿರ್ಧಾರ ತೆಗೆದುಕೊಂಡಿದ್ದಾರೆ.
ರೋಹಿಣಿ ಅವರು ತಮ್ಮ ಸಹೋದರ ತೇಜಸ್ವಿ ಯಾದವ್ ಅವರನ್ನು ತೀವ್ರವಾಗಿ ಟೀಕಿಸಿ, ತಾವು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಸಂಬಂಧಿಕರೊಬ್ಬರು ತಮ್ಮ ತಂದೆಗೆ ನೀಡಿದ ಮೂತ್ರಪಿಂಡವನ್ನು “ಕೊಳಕು” ಎಂದು ಕರೆದು, ಅದಕ್ಕೆ ಬದಲಾಗಿ ಚುನಾವಣಾ ಟಿಕೆಟ್ ಖರೀದಿಸಿದ್ದಾರೆ ಎಂದು ಹೀಯಾಳಿಸಿದ್ದಾರೆ ಎಂಬ ಆರೋಪಕ್ಕೆ ರೋಹಿಣಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಸೋಲು ಕಾಣುತ್ತಿದ್ದಂತೆಯೇ ಈ ಘಟನೆ ನಡೆದಿದೆ. ರೋಹಿಣಿ ಅವರು ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಉಳಿಸಲು ಒಂದು ಮೂತ್ರಪಿಂಡವನ್ನು ದಾನ ಮಾಡಿದ್ದರು.. ಆದರೆ ಈಗ ಅದೇ ತ್ಯಾಗವನ್ನು ಸಂಬಂಧಿಕರು ಅಪಹಾಸ್ಯ ಮಾಡುತ್ತಿರುವುದು ರೋಹಿಣಿ ಅವರಿಗೆ ನೋವುಂಟು ಮಾಡಿದೆ. “ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್ ಖರೀದಿಸಿದ್ದಾರೆ” ಎಂಬ ಆರೋಪವು ಕುಟುಂಬದ ಆಂತರಿಕ ಕಲಹವನ್ನು ಬಯಲುಮಾಡಿದೆ. ರೋಹಿಣಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎರಡು ಭಾವನಾತ್ಮಕ ಪೋಸ್ಟ್‌ಗಳನ್ನು ಹಾಕಿ, ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ರೋಹಿಣಿ ಅವರ ಪೋಸ್ಟ್‌ನಲ್ಲಿ, “ಸಂಬಂಧಿಕರು ನನ್ನನ್ನು ಶಪಿಸಿದ್ದಾರೆ, ಕೊಳಕು ಎಂದು ಜರಿದಿದ್ದಾರೆ. ನನ್ನ ತಂದೆಗೆ ಚುನಾವಣಾ ಟಿಕೆಟ್ ಬದಲಾಗಿ ಕೊಳಕು ಮೂತ್ರಪಿಂಡ ನೀಡಿದ್ದೇನೆ ಎಂದು ಹೀಯಾಳಿಸಿದ್ದಾರೆ. ಇದು ನನಗೆ ತುಂಬಾ ಬೇಸರ ತಂದಿದೆ” ಎಂದು ಬರೆದಿದ್ದಾರೆ. “ನನ್ನ ತಂದೆಯನ್ನು ಉಳಿಸಿಕೊಳ್ಳಲು ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಆದರೆ ಅದನ್ನೇ ಕೊಳಕು ಎಂದು ಕರೆದಿದ್ದಾರೆ. ನಿಮ್ಮಲ್ಲಿ ಯಾರೂ ನನ್ನಂತಹ ತಪ್ಪು ಮಾಡದಿರಲಿ, ಯಾವುದೇ ಕುಟುಂಬಕ್ಕೆ ರೋಹಿಣಿಯಂತಹ ಮಗಳು ಎಂದಿಗೂ ಸಿಗದಿರಲಿ” ಎಂದು ಬರೆದಿದ್ದಾರೆ.
ಮೊದಲು ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ತೇಜ್ ಪ್ರತಾಪ್ ತಮ್ಮದೇ ಆದ ಪಕ್ಷ ಸ್ಥಾಪಿಸಿ, ಬಿಹಾರ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧಿಸಿದ್ದರು. ಈಗ ರೋಹಿಣಿ ಅವರು ಪಕ್ಷದೊಂದಿಗಿನ ಸಂಬಂಧ ಕಡಿದುಕೊಂಡು, ರಾಜಕೀಯದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. “ನನ್ನ ಎದುರು ಚಪ್ಪಲಿ ಎತ್ತಿದ್ದಾರೆ, ನಾನು ನನ್ನ ಸ್ವಾಭಿಮಾನದ ಮೇಲೆ ರಾಜಿ ಮಾಡಿಕೊಳ್ಳಲಿಲ್ಲ. ಸತ್ಯವನ್ನು ಬಿಟ್ಟುಕೊಡಲಿಲ್ಲ. ಇದರಿಂದಾಗಿಯೇ ನಾನು ಈ ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಸರನ್ ಕ್ಷೇತ್ರದಿಂದ ರೋಹಿಣಿ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅವರು ಸೋತಿದ್ದರು. ಈ ಸೋಲು ಪಕ್ಷಕ್ಕೆ ಆಘಾತವಾದರೂ, ಕುಟುಂಬದೊಳಗಿನ ಕಲಹವು ಇದೀಗ ಬೀದಿಗೆ ಬಂದಿದೆ. ತೇಜಸ್ವಿ ಯಾದವ್ ಅವರು ಪಕ್ಷದ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಹಿಣಿ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
