ಜುಲೈ 15 ರಿಂದ ಆಗಸ್ಟ್ 15ರವರೆಗೆ ಕೆಂಪುಕೋಟೆ ಬಂದ್; ಪ್ರವಾಸಿಗರಿಗೆ ನೋ ಎಂಟ್ರಿ!

Untitled design 2026 07 15T132337.507

ನವದೆಹಲಿ, ಜುಲೈ (15): ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ಐತಿಹಾಸಿಕ  ಕೆಂಪುಕೋಟೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹೊರಡಿಸಿರುವ ಆದೇಶದಂತೆ ಜುಲೈ 15ರಿಂದ ಆಗಸ್ಟ್ 15ರವರೆಗೆ ಪ್ರವಾಸಿಗರಿಗೆ ಕೆಂಪುಕೋಟೆಗೆ ಪ್ರವೇಶ ಇರುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಭದ್ರತಾ ಸಿದ್ಧತೆಗಳು ಹಾಗೂ ಅಧಿಕೃತ ವ್ಯವಸ್ಥೆಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ವರ್ಷ ಆಗಸ್ಟ್ 15ರಂದು ಪ್ರಧಾನಮಂತ್ರಿ ಕೆಂಪುಕೋಟೆಯ ಮೇಲ್ಭಾಗದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವರು, ಗಣ್ಯರು, ಸೇನಾ ಅಧಿಕಾರಿಗಳು, ವಿದೇಶಿ ಅತಿಥಿಗಳು ಸೇರಿದಂತೆ ಸಾವಿರಾರು ಆಹ್ವಾನಿತರು ಭಾಗವಹಿಸುತ್ತಾರೆ. ಇದೇ ಕಾರಣಕ್ಕೆ ಭದ್ರತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಕೆಂಪುಕೋಟೆ ಆವರಣದಲ್ಲಿ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ಭದ್ರತಾ ತಪಾಸಣೆ, ಪೂರ್ವಾಭ್ಯಾಸ, ಸಿಸಿಟಿವಿ ಅಳವಡಿಕೆ ಹಾಗೂ ವಿವಿಧ ಭದ್ರತಾ ಪಡೆಗಳ ನಿಯೋಜನೆ ಸೇರಿದಂತೆ ಹಲವು ಸಿದ್ಧತಾ ಕಾರ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಕೆಂಪುಕೋಟೆಗೆ ಸಾಮಾನ್ಯ ಪ್ರವಾಸಿಗರ ಪ್ರವೇಶವನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಇದು ಮೊದಲ ಬಾರಿಗೆ ಕೈಗೊಂಡ ಕ್ರಮವಲ್ಲ. ಕಳೆದ ಕೆಲವು ವರ್ಷಗಳಿಂದಲೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇದೇ ರೀತಿಯ ನಿರ್ಬಂಧ ಜಾರಿಯಲ್ಲಿದೆ. 2025ರಲ್ಲಿ ಜುಲೈ 15ರಿಂದ ಆಗಸ್ಟ್ 15ರವರೆಗೆ, 2021ರಲ್ಲಿ ಜುಲೈ 21ರಿಂದ ಆಗಸ್ಟ್ 15ರವರೆಗೆ ಹಾಗೂ 2018ರಲ್ಲಿ ಆಗಸ್ಟ್ 8ರಿಂದ ಆಗಸ್ಟ್ 15ರವರೆಗೆ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು.

ಇತ್ತೀಚೆಗೆ ಕೆಂಪುಕೋಟೆಯನ್ನು ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿದ್ದ ಘಟನೆ ಕೂಡ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲು ಕಾರಣವಾಗಿದೆ. ನಂತರದ ತನಿಖೆಯಲ್ಲಿ ಅದು ಹುಸಿ ಕರೆ ಎಂದು ದೃಢಪಟ್ಟಿದ್ದರೂ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಯಾವುದೇ ರೀತಿಯ ನಿರ್ಲಕ್ಷ್ಯ ತೋರದಿರಲು ಭದ್ರತಾ ಸಂಸ್ಥೆಗಳು ನಿರ್ಧರಿಸಿವೆ.

ಹೀಗಾಗಿ ಆಗಸ್ಟ್ 15ರವರೆಗೆ ಕೆಂಪುಕೋಟೆಗೆ ಭೇಟಿ ನೀಡಲು ಯೋಜಿಸಿರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಮತ್ತೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ASI ತಿಳಿಸಿದೆ.

Exit mobile version