RBI ಹೊಸ ಯೋಜನೆ: 2027ರಿಂದ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳ ಯುಗ..?

ನವದೆಹಲಿ (ಜುಲೈ 27): ಭಾರತದಲ್ಲಿ ಕರೆನ್ಸಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು   (RBI) ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಪಾಲಿಮರ್ ಅಥವಾ ಪ್ಲಾಸ್ಟಿಕ್ (Plastic/Polymer) ವಸ್ತುವಿನಿಂದ ತಯಾರಿಸಿದ 10 ರೂ. ಹಾಗೂ 20 ರೂ. ಮುಖಬೆಲೆಯ ನೋಟುಗಳನ್ನು ಮೊದಲ ಹಂತದಲ್ಲಿ ಪರಿಚಯಿಸುವ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ವರದಿಗಳು ತಿಳಿಸಿದೆ. ಈ ಸಂಬಂಧ ನೋಟು ಮುದ್ರಣ ಸಂಸ್ಥೆಯು ಜಾಗತಿಕ ಟೆಂಡರ್ ಆಹ್ವಾನಿಸಿದ್ದು, ದೇಶೀಯ ಹಾಗೂ ವಿದೇಶಿ ಉತ್ಪಾದಕರಿಗೆ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಆಗಸ್ಟ್ 18ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ

ಲಭ್ಯ ಇರುವ ಮಾಹಿತಿಯ ಪ್ರಕಾರ, ಆಗಸ್ಟ್ 18, 2026ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆರಂಭದಲ್ಲಿ 10 ರೂ. ಮತ್ತು 20 ರೂ. ಮುಖಬೆಲೆಯ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತಂದು, ನಂತರ ಹಂತ ಹಂತವಾಗಿ ಇತರೆ ಮುಖಬೆಲೆಯ ನೋಟುಗಳನ್ನೂ ಪಾಲಿಮರ್ ರೂಪಕ್ಕೆ ಪರಿವರ್ತಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೊಸ ಪ್ಲಾಸ್ಟಿಕ್ ನೋಟುಗಳು ಬಿಡುಗಡೆಯಾದರೂ, ಈಗಾಗಲೇ ಚಲಾವಣೆಯಲ್ಲಿರುವ ಕಾಗದದ ನೋಟುಗಳು ತಕ್ಷಣವೇ ಅಮಾನ್ಯವಾಗುವುದಿಲ್ಲ. ಎರಡೂ ಮಾದರಿಯ ನೋಟುಗಳು ಕೆಲವು ಕಾಲ ಸಮಾನಾಂತರವಾಗಿ ಚಲಾವಣೆಯಲ್ಲಿದ್ದು, ಬಳಿಕ ಹಂತ ಹಂತವಾಗಿ ಕಾಗದದ ನೋಟುಗಳನ್ನು ಹಿಂಪಡೆಯುವ ಯೋಜನೆ ಇರಬಹುದು ಎಂದು ಹೇಳಲಾಗುತ್ತಿದೆ.

ಪಾಲಿಮರ್ ನೋಟುಗಳ ಪ್ರಮುಖ ಪ್ರಯೋಜನವೇನು?

ಪಾಲಿಮರ್ ನೋಟುಗಳ ಪ್ರಮುಖ ಪ್ರಯೋಜನವೆಂದರೆ ಅವು ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ತಜ್ಞರ ಪ್ರಕಾರ, ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಸುಮಾರು ಆರು ಪಟ್ಟು ಹೆಚ್ಚು ಕಾಲ ಬಳಕೆಯಾಗುತ್ತವೆ. ನೀರು, ಬೆವರು ಹಾಗೂ ಮಣ್ಣಿನಿಂದ ಸುಲಭವಾಗಿ ಹಾಳಾಗುವುದಿಲ್ಲ. ಹರಿದು ಹೋಗುವ ಸಾಧ್ಯತೆಯೂ ಕಡಿಮೆ.

ನಕಲಿ ನೋಟುಗಳ ತಡೆಗಟ್ಟುವಿಕೆ

ಇದರ ಜೊತೆಗೆ ಪಾಲಿಮರ್ ನೋಟುಗಳಲ್ಲಿ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಬಹುದಾಗಿದ್ದು, ನಕಲಿ ನೋಟು ತಯಾರಿಕೆಯನ್ನು ತಡೆಯಲು ಇದು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ದೀರ್ಘಾವಧಿಯಲ್ಲಿ ನೋಟು ಮುದ್ರಣ ವೆಚ್ಚವೂ ಶೇ. 30ರಿಂದ 60ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

60ಕ್ಕೂ ಹೆಚ್ಚು ದೇಶಗಳಲ್ಲಿ ಪಾಲಿಮರ್ ನೋಟು ಬಳಕೆ 

ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್, ಸಿಂಗಪುರ, ಮಲೇಷ್ಯಾ, ಥೈಲ್ಯಾಂಡ್, ಇಂಡೋನೇಷ್ಯಾ, ನ್ಯೂಜಿಲೆಂಡ್, ವಿಯೆಟ್ನಾಂ, ಒಮಾನ್ ಹಾಗೂ ರೊಮೇನಿಯಾ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳು ಪಾಲಿಮರ್ ನೋಟುಗಳನ್ನು ಯಶಸ್ವಿಯಾಗಿ ಬಳಕೆ ಮಾಡುತ್ತಿವೆ.

Exit mobile version