ಬ್ಯಾಂಕ್ ಆಫ್ ಬರೋಡಾಗೆ ಸೈಬರ್ ಶಾಕ್! 1TB ಡೇಟಾ ಡಾರ್ಕ್ ವೆಬ್‌ನಲ್ಲಿ ಸೋರಿಕೆ?

Untitled design (31)

ನವದೆಹಲಿ (ಜುಲೈ 27): ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda) ಭಾರೀ ಸೈಬರ್ ದಾಳಿಗೆ ತುತ್ತಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹ್ಯಾಕರ್‌ಗಳು ಬ್ಯಾಂಕ್‌ನ ಸರ್ವರ್‌ಗಳನ್ನು ಭೇದಿಸಿ ಸುಮಾರು 1 ಟಿಬಿ (1TB) ಗೂ ಅಧಿಕ ಸಂವೇದನಾಶೀಲ ಮಾಹಿತಿಯನ್ನು ಕಳವು ಮಾಡಿ ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಆರೋಪಗಳ ಕುರಿತು ಬ್ಯಾಂಕ್ ಅಥವಾ ಸಂಬಂಧಿತ ಸರ್ಕಾರಿ ಸಂಸ್ಥೆಗಳು ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ.

ವರದಿಗಳ ಪ್ರಕಾರ, ಸೋರಿಕೆಯಾಗಿದೆ ಎನ್ನಲಾದ ಮಾಹಿತಿಯಲ್ಲಿ ಗ್ರಾಹಕರ ಹೆಸರುಗಳು, ಆಧಾರ್ ಸಂಖ್ಯೆಗಳು, ಉಳಿತಾಯ ಹಾಗೂ ಚಾಲ್ತಿ ಖಾತೆಗಳ ವಿವರಗಳು, ಸಾಲದ ದಾಖಲೆಗಳು, ನೆಟ್ ಬ್ಯಾಂಕಿಂಗ್ ಬಳಕೆದಾರರ ಮಾಹಿತಿ, ಎನ್‌ಆರ್‌ಐ ಹಾಗೂ ಕಾರ್ಪೊರೇಟ್ ಬ್ಯಾಂಕಿಂಗ್ ದಾಖಲೆಗಳು ಸೇರಿದಂತೆ ಬ್ಯಾಂಕ್‌ನ ಆಂತರಿಕ ಆಡಿಟ್ ವರದಿಗಳು ಮತ್ತು ಇಮೇಲ್ ಸಂವಹನಗಳೂ ಸೇರಿವೆ ಎನ್ನಲಾಗಿದೆ. ಈ ಮಾಹಿತಿ ನಿಜವಾಗಿದ್ದರೆ, ಇದು ಭಾರತದ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಸೈಬರ್ ಭದ್ರತಾ ಘಟನೆಗಳಲ್ಲಿ ಒಂದಾಗುವ ಸಾಧ್ಯತೆ ಇದೆ.

ಈ ವಿಚಾರವನ್ನು ಮೊದಲಿಗೆ ‘ಕ್ಯಾಶ್‌ಲೆಸ್‌ಕನ್ಸ್ಯೂಮರ್’ (Cashless Consumer) ಸಂಸ್ಥೆಯ ಸಂಸ್ಥಾಪಕ ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀಕಾಂತ್ ಲಕ್ಷ್ಮಣನ್ ಬಹಿರಂಗಪಡಿಸಿದ್ದಾರೆ. ಹ್ಯಾಕರ್ ಬಿಡುಗಡೆ ಮಾಡಿದ್ದ ಮಾದರಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವು ಬ್ಯಾಂಕ್ ಆಫ್ ಬರೋಡಾದ ಆಂತರಿಕ ದಾಖಲೆಗಳಂತೆಯೇ ಕಾಣುತ್ತಿವೆ ಎಂದು ಅವರು ತಿಳಿಸಿದ್ದಾರೆ. ಜುಲೈ 25ರಂದು ransomware.live ವೆಬ್‌ಸೈಟ್‌ನಲ್ಲಿ ಈ ಹ್ಯಾಕಿಂಗ್ ಪ್ರಕರಣದ ಬಗ್ಗೆ ಮೊದಲ ಮಾಹಿತಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಈ ದಾಳಿಯ ಹಿಂದೆ TripleX ಎಂಬ ಹೊಸ ಹ್ಯಾಕಿಂಗ್ ಗುಂಪಿನ ಕೈವಾಡ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ಗುಂಪು ಕಳೆದ ಮೇ ತಿಂಗಳಲ್ಲಿ ಇಂಡೋನೇಷ್ಯಾದ ಪ್ರಮುಖ ಬ್ಯಾಂಕ್‌ನಿಂದ ಸುಮಾರು 2TB ಡೇಟಾವನ್ನು ಕಳವು ಮಾಡಿತ್ತು ಎನ್ನಲಾಗಿದೆ. ಈ ಬಾರಿ ಹಣಕ್ಕಾಗಿ ಬೇಡಿಕೆ ಇಡದೇ, ಕದ್ದ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಆದರೆ ಈವರೆಗೆ ಬ್ಯಾಂಕ್ ಆಫ್ ಬರೋಡಾ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ CERT-In ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಹೀಗಾಗಿ, ಈ ವರದಿಗಳನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.

ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ತಕ್ಷಣವೇ ತಮ್ಮ ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು, ಅಪರಿಚಿತ OTPಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು, ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಹಾಗೂ ಬ್ಯಾಂಕ್ ಹೆಸರಿನಲ್ಲಿ ಬರುವ ನಕಲಿ ಕರೆಗಳು ಅಥವಾ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

Exit mobile version