ರಾಣಿ ಚೆನ್ನಭೈರಾದೇವಿ ಸ್ಮರಣಾರ್ಥ ಅಂಚೆ ಚೀಟಿ ಅನಾವರಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

111 (42)

ನವದೆಹಲಿ: “ಮೆಣಸಿನ ರಾಣಿ” ಎಂದೇ ಖ್ಯಾತರಾದ ರಾಣಿ ಚೆನ್ನಭೈರಾದೇವಿಯವರ ಸ್ಮರಣಾರ್ಥ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು. ಚೆನ್ನಭೈರಾದೇವಿಯವರ ಧೈರ್ಯ, ಸಾಮ್ರಾಜ್ಯ ನಿರ್ವಹಣೆ, ಮತ್ತು ವ್ಯಾಪಾರ ಕೌಶಲ್ಯವನ್ನು ಈ ಅಂಚೆ ಚೀಟಿಯ ಮೂಲಕ ಸ್ಮರಿಸಲಾಗಿದೆ.

ರಾಣಿ ಚೆನ್ನಭೈರಾದೇವಿಯ ಸಾಧನೆ:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಚೆ ಚೀಟಿ ಬಿಡುಗಡೆಯ ನಂತರ ಮಾತನಾಡಿ, “ರಾಣಿ ಚೆನ್ನಭೈರಾದೇವಿಯವರ ಧೈರ್ಯ, ಸ್ಥೈರ್ಯ, ಮತ್ತು ಸಾಧನೆಯನ್ನು ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ಈ ಘಟನೆ ಅವಿಸ್ಮರಣೀಯವಾಗಿದೆ. ರಾಷ್ಟ್ರಪತಿ ಭವನವನ್ನು ಪ್ರವೇಶಿಸುವುದೇ ದೊಡ್ಡ ಗೌರವವಾದರೆ, ಆಕೆಯ ಸಾಧನೆಯನ್ನು ಸಮೀಪದಿಂದ ಗೌರವಿಸುವುದು ಅತ್ಯಂತ ಭಾಗ್ಯದ ವಿಷಯ,” ಎಂದರು.

1552ರಿಂದ 1606ರವರೆಗೆ 54 ವರ್ಷಗಳ ಕಾಲ ಹೈವ, ತುಳುವ, ಮತ್ತು ಕೊಂಕಣ ಪ್ರದೇಶಗಳನ್ನು ಗೇರುಸೊಪ್ಪೆ ಮತ್ತು ಹಾಡುವಳ್ಳಿ ಅವಳಿ ಪಟ್ಟಣಗಳ ಕೇಂದ್ರದಿಂದ ಆಳಿದ ಚೆನ್ನಭೈರಾದೇವಿಯವರು ಸರ್ವಧರ್ಮ ಸಮನ್ವಯ ಸಾಧಿಸಿದ ಜಿನಮಾನಿನಿ. ಆಕೆ ಯುರೋಪಿನ ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಶುಂಠಿ ವ್ಯಾಪಾರವನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಪೋರ್ಚುಗೀಸರ ರಾಜಕೀಯ ಮತ್ತು ಮತೀಯ ಅತಿರೇಕಗಳನ್ನು ಕಾಳಿ ನದಿಯ ತೀರದಲ್ಲಿ ತಡೆದು, ಯಾವುದೇ ಯುದ್ಧವನ್ನು ತಾವಾಗಿ ಆರಂಭಿಸದಿದ್ದರೂ, ತಮ್ಮ ಮೇಲೆ ದಾಳಿ ಮಾಡಿದವರನ್ನು ಬಗ್ಗು ಬಡಿಯದೆ ಬಿಟ್ಟಿರಲಿಲ್ಲ. ಸರ್ವಸಮನ್ವಯತೆಯಿಂದ ಆಡಳಿತ ನಡೆಸಿ, ರಾಜ್ಯವನ್ನು ಸಮೃದ್ಧ, ಶ್ರೀಮಂತ, ಮತ್ತು ಸುರಕ್ಷಿತವಾಗಿಟ್ಟಿದ್ದರು.

ದೌರ್ಭಾಗ್ಯವೆಂದರೆ, ಚೆನ್ನಭೈರಾದೇವಿಯವರಂತಹ ವೀರ ಮಹಿಳೆಯ ಸಾಧನೆ ಇತಿಹಾಸದ ಮುಖ್ಯವಾಹಿನಿಯ ಪುಟಗಳಲ್ಲಿ ಸ್ಥಾನ ಪಡೆಯಲಿಲ್ಲ. ಪೋರ್ಚುಗೀಸರೇ ಆಕೆಗೆ “ರೈನಾ ದಿ ಪೆಮೆಂಟಾ” (ಕಾಳುಮೆಣಸಿನ ರಾಣಿ) ಎಂಬ ಬಿರುದು ನೀಡಿ ಗೌರವಿಸಿದ್ದರು. 1606ರಲ್ಲಿ ಕೆಳದಿ ಅರಸರ ತಂತ್ರಗಾರಿಕೆಯಿಂದ ಬಂಧನಕ್ಕೊಳಗಾಗಿ, ಹಳೆ ಇಕ್ಕೇರಿಯಲ್ಲಿ ಜಿನಪದ್ಧತಿಯಂತೆ ನಿರಾಹಾರ ವ್ರತದ ಮೂಲಕ ಸಲ್ಲೇಖದಿಂದ ಇಹಲೋಕ ತ್ಯಜಿಸಿದ್ದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, “ರಾಣಿ ಚೆನ್ನಭೈರಾದೇವಿಯವರು ಕರ್ನಾಟಕದ ಹೆಮ್ಮೆ. ಐನೂರು ವರ್ಷಗಳ ಹಿಂದೆಯೇ ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಆಕೆ ಕಾರಣಳಾದರು. ವಾಣಿಜ್ಯ ವ್ಯವಹಾರದಲ್ಲಿ ನೈಪುಣ್ಯತೆ ಗಳಿಸಿಕೊಟ್ಟ ಆಕೆಯ ಶೌರ್ಯ, ಕೌಶಲ, ದಯೆ, ಮತ್ತು ಕರುಣೆಯ ವ್ಯಕ್ತಿತ್ವ ನಮ್ಮ ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಚಿಲುಮೆ,” ಎಂದರು.

ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, “ಇತಿಹಾಸದ ಗರ್ಭದಲ್ಲಿ ಅಡಗಿಹೋದ ಚೆನ್ನಭೈರಾದೇವಿಯಂತಹ ವ್ಯಕ್ತಿತ್ವಕ್ಕೆ ಈಗ ನ್ಯಾಯ ಸಿಗುತ್ತಿದೆ. ಆಕೆಯ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ,” ಎಂದರು.

Exit mobile version