ಜೈಪುರ: ರಾಜಸ್ಥಾನದ ಕಲಾ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಯುವ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ (30) ಅವರು ರಸ್ತೆ ಅಪಘಾತದಲ್ಲಿ. ತಡರಾತ್ರಿ ಜೈಪುರದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಘಟನೆಯ ಹಿನ್ನೆಲೆ
ಜೈಪುರದ ಅತ್ಯಂತ ಜನನಿಬಿಡ ಪ್ರದೇಶವಾದ ಶಿಪಾ ಪಥ್ ರಸ್ತೆಯಲ್ಲಿ ಸೋಮವಾರ ರಾತ್ರಿ ಸುಮಾರು 11:30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಹರ್ಷಿಲ್ ಅವರು ತಮ್ಮ ಕೆಲಸಗಳನ್ನು ಮುಗಿಸಿ ಸ್ವತಃ ಕಾರು ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯೆ ಅವರ ಕಾರು ಹಠಾತ್ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲಿದ್ದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಕಾರು ಡಿವೈಡರ್‌ಗೆ ಅಪ್ಪಳಿಸಿದ ಕೂಡಲೇ ಎಡಭಾಗಕ್ಕೆ ಪಲ್ಟಿಯಾಗಿದೆ. ಈ ಸಂಪೂರ್ಣ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರು ಅತಿ ವೇಗವಾಗಿ ಬಂದು ಅಪ್ಪಳಿಸಿರುವುದು ಕಂಡುಬಂದಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ಧಾವಿಸಿ ,ಪಲ್ಟಿಯಾಗಿದ್ದ ಕಾರನ್ನು ನೇರಗೊಳಿಸಿ, ಸಿಲುಕಿದ್ದ ಹರ್ಷಿಲ್ ಅವರನ್ನು ಹೊರತೆಗೆಯಲಾಯಿತು. ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಪಘಾತದಲ್ಲಿ ಅವರ ತಲೆಗೆ ಅತ್ಯಂತ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೆದುಳಿಗೆ ತೀವ್ರ ಹಾನಿಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಅತಿ ವೇಗವೇ ಪ್ರಮುಖ ಕಾರಣವೇ ಅಥವಾ ಬೇರೆ ಯಾವುದಾದರೂ ವಾಹನ ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಈ ಅವಘಡ ಸಂಭವಿಸಿದೆಯೇ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಯುತ್ತಿದೆ. ಹರ್ಷಿಲ್ ಅವರ ತಂದೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಮಗಳ ಸಾವಿನ ಸುದ್ಧಿ ಕೇಳಿ ಕುಟುಂಬ ಕಂಗೆಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಬಹುಮುಖ ಪ್ರತಿಭೆಯ ಹರ್ಷಿಲ್ ಕಾಲಿಯಾ
ಹರ್ಷಿಲ್ ಕಾಲಿಯಾ ಕೇವಲ ಮಾಡೆಲಿಂಗ್‌ಗೆ ಸೀಮಿತವಾಗಿರಲಿಲ್ಲ. ಅವರು ‘ಕ್ರೈಮ್ ನೆಕ್ಸ್ಟ್ ಡೋರ್’ ಎಂಬ ಜನಪ್ರಿಯ ವೆಬ್ ಸರಣಿಯಲ್ಲಿ ಅಭಿನಯಿಸುವ ಮೂಲಕ ನಟಿಯಾಗಿ ಗುರುತಿಸಿಕೊಂಡಿದ್ದರು. ಇದಕ್ಕೂ ಮೊದಲು ಸುದ್ದಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ಅವರು, ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿದ್ದರು. ಹಲವು ರಾಜಸ್ಥಾನಿ ವಿಡಿಯೋ ಸಾಂಗ್‌ಗಳಲ್ಲಿ ನಾಯಕಿಯಾಗಿ ನಟಿಸಿ ರಾಜ್ಯಾದ್ಯಂತ ಮನೆಮಾತಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಮಾಡೆಲಿಂಗ್ ಮತ್ತು ನಟನೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದರು.
