ನಿಮಗೆ ನಾಚಿಕೆ ಆಗಲ್ವಾ? ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ರಣಾರ್ಭಟ

Untitled design 2026 02 11T140429.140

ನವದೆಹಲಿ: ಕೇಂದ್ರ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂಧನ ಭದ್ರತೆ ಹಾಗೂ ಆರ್ಥಿಕ ಸ್ವಾವಲಂಬನೆ ಕುರಿತ ಮಾಹಿತಿ ಬಜೆಟ್‌ನಲ್ಲಿ ಕಾಣಿಸಿಲ್ಲ ಎಂದು ಆರೋಪಿಸಿದ್ದಾರೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶಕ್ಕೆ ಪೂರಕವಾಗುವಂತೆ ಬಜೆಟ್ ಮಂಡನೆಯಾಗಿಲ್ಲ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಒಪ್ಪಂದಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ. “ಅಮೆರಿಕ ಸೂಪರ್ ಪವರ್ ಆಗಿ ಉಳಿಯಲು ಭಾರತದ 1.4 ಬಿಲಿಯನ್ ಜನರ ಡೇಟಾವನ್ನು ಬಳಸುತ್ತಿದೆ. ಚೀನಾ ಬಳಿ ಕೂಡ ಇದೇ ಪ್ರಮಾಣದ ಡೇಟಾ ಶಕ್ತಿ ಇದೆ. ಚೀನಾವನ್ನು ಎದುರಿಸಲು ಅಮೆರಿಕಕ್ಕೆ ಭಾರತದ ಡೇಟಾ ಅಗತ್ಯವಿದೆ. ಆದರೆ ನಮ್ಮ ಜನರ ಮಾಹಿತಿಯನ್ನು ರಕ್ಷಿಸುವ ವ್ಯವಸ್ಥೆ ಇಲ್ಲ,” ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಜನಸಂಖ್ಯೆಯೇ ನಮ್ಮ ದೊಡ್ಡ ಶಕ್ತಿ. ಈ ಡೇಟಾ ಶಕ್ತಿಯನ್ನು ರಕ್ಷಿಸುವ ಕೆಲಸ ಸರ್ಕಾರದ ಮೊದಲ ಆದ್ಯತೆ ಆಗಬೇಕು ಎಂದು ಒತ್ತಾಯಿಸಿದರು. “ಭಾರತ ಅಮೆರಿಕಕ್ಕೆ ಉಚಿತವಾಗಿ ಡೇಟಾ ಒದಗಿಸುತ್ತಿದೆಯೇ?” ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ಟ್ಯಾರಿಫ್ ವಿವಾದ: 3%ರಿಂದ 18%ಕ್ಕೆ ಏರಿಕೆ?

ವಾಣಿಜ್ಯ ಸಂಬಂಧಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಅಮೆರಿಕದ ಟ್ಯಾರಿಫ್ ನೀತಿಯಲ್ಲಿ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. “ಮೊದಲು 3% ಇದ್ದ ಟ್ಯಾರಿಫ್ ಈಗ 18% ಆಗಿದೆ. ಆದರೆ ಬಾಂಗ್ಲಾದೇಶಕ್ಕೆ 0% ಟ್ಯಾರಿಫ್ ನೀಡಲಾಗಿದೆ. ಭಾರತಕ್ಕೆ ಮಾತ್ರ ಹೆಚ್ಚುವರಿ ಭಾರ ಏಕೆ?” ಎಂದು ಅವರು ಪ್ರಶ್ನಿಸಿದರು.

ಅಮೆರಿಕದ ಕೃಷಿ ಸರಕುಗಳಿಗೆ ಭಾರತ ಬಾಗಿಲು ತೆರೆದಿರುವುದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. “ಇದುವರೆಗೆ ಯಾವ ಸರ್ಕಾರವೂ ರೈತರ ಹಿತವನ್ನು ಈ ರೀತಿ ಬಲಿ ಕೊಡಲಿಲ್ಲ. ಅಮೆರಿಕ ಸರಕುಗಳಿಂದ ನಮ್ಮ ರೈತರನ್ನು ರಕ್ಷಿಸಬೇಕಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಇಂಧನ ಖರೀದಿ ಮತ್ತು ವಿದೇಶಾಂಗ ನೀತಿ

ಇಂಧನ ಖರೀದಿಯ ವಿಚಾರದಲ್ಲೂ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್‌ ಗಾಂಧಿ, “ನಾವು ಯಾರಿಂದ ತೈಲ ಖರೀದಿಸಬೇಕೆಂದು ಅಮೆರಿಕ ಆಜ್ಞೆ ಮಾಡುತ್ತಿದೆ. ಇದು ಸ್ವತಂತ್ರ ದೇಶದ ನೀತಿಯೇ?” ಎಂದು ಪ್ರಶ್ನಿಸಿದರು. ಭಾರತದ ವಿದೇಶಾಂಗ ನೀತಿ ಸ್ವಾಯತ್ತತೆಯನ್ನು ಕಾಪಾಡಬೇಕಾದರೆ ಇಂತಹ ಒತ್ತಡಗಳಿಗೆ ತಲೆಬಾಗಬಾರದು ಎಂದು ಹೇಳಿದರು.

ಪಾಕಿಸ್ತಾನ ಮತ್ತು ಜಾಗತಿಕ ರಾಜಕೀಯ

“ಭಾರತ ಪಾಕಿಸ್ತಾನಕ್ಕೆ ಸಮವಲ್ಲ, ಪಾಕಿಸ್ತಾನಕ್ಕಿಂತ ಎತ್ತರದಲ್ಲಿದೆ. ಆದರೆ ಪಾಕಿಸ್ತಾನದ ಸೇನಾ ಮುಖ್ಯಸ್ಥನ ಜೊತೆ ಅಮೆರಿಕ ಅಧ್ಯಕ್ಷ ಔತಣ ಕೂಟ ನಡೆಸುತ್ತಾರೆ. ಇದು ಭಾರತದ ಗೌರವಕ್ಕೆ ಧಕ್ಕೆ ತರುವ ವಿಷಯ,” ಎಂದು ರಾಹುಲ್ ಗಾಂಧಿ ತಿಳಿಸಿದರು.

ಪ್ರಧಾನಿ ವಿರುದ್ಧ ತೀವ್ರ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ದಾಳಿ ನಡೆಸಿದ ರಾಹುಲ್ ಗಾಂಧಿ, “ದೇಶ ಮಾರಿರೋದಕ್ಕೆ ನಾಚಿಕೆ ಆಗೋದಿಲ್ಲವೇ? ಭಾರತ ಮಾತೆಯನ್ನು ಮಾರಿದ್ದಕ್ಕೆ ಪ್ರಧಾನಿ ನಾಚಿಕೆ ಪಡಬೇಕಲ್ಲವೇ?” ಎಂದು ಕಿಡಿಕಾರಿದರು. “ಅಮೆರಿಕ, ಪ್ರಧಾನಿ ಮೋದಿ ಅವರ ಕುತ್ತಿಗೆ ಹಿಡಿದು ಕೆಲಸ ಮಾಡಿಸುತ್ತಿದೆ,” ಎಂಬ ಗಂಭೀರ ಆರೋಪವನ್ನೂ ಮಾಡಿದರು.

ಎಪ್‌ಸ್ಟೀನ್ ಫೈಲ್ಸ್ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಜಾಗತಿಕ ರಾಜಕೀಯ ಒತ್ತಡಗಳ ನಡುವೆ ಭಾರತ ತನ್ನ ಸ್ವಾಭಿಮಾನ ಮತ್ತು ಡೇಟಾ ಭದ್ರತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.

Exit mobile version