ರಾಹುಲ್ ಗಾಂಧಿ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಅಪಘಾತ: ಪೊಲೀಸ್ ಕಾನ್‌ಸ್ಟೆಬಲ್‌ಗೆ ಗಾಯ

Untitled design 2025 08 19t170752.449

ಬಿಹಾರದ ನವಾಡಾ ಜಿಲ್ಲೆಯಲ್ಲಿ ನಡೆದ ‘ಮತದಾರ ಯಾತ್ರೆ’ಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಕರೆದೊಯ್ಯುತ್ತಿದ್ದ ವಾಹನವು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರ‍್ಯಾಲಿಯಲ್ಲಿ ಭಾರೀ ಜನಸಂದಣಿ ಸೇರಿದ್ದರಿಂದ ಕಾನ್‌ಸ್ಟೆಬಲ್‌ನ ಕಾಲು ವಾಹನದ ಚಕ್ರದ ಕೆಳಗೆ ಸಿಲುಕಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ಗಾಯಗೊಂಡ ಕಾನ್‌ಸ್ಟೆಬಲ್‌ನನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ರಾಹುಲ್ ಗಾಂಧಿ ಸ್ವತಃ ಕಾನ್‌ಸ್ಟೆಬಲ್‌ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಕಾನ್‌ಸ್ಟೆಬಲ್‌ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದ ನಂತರ ತಮ್ಮ ಯಾತ್ರೆಯನ್ನು ಮುಂದುವರೆಸಿದರು.

ಆಗಸ್ಟ್ 17, 2025 ರಂದು ಪ್ರಾರಂಭವಾದ ರಾಹುಲ್ ಗಾಂಧಿಯವರ ‘ಮತದಾರ ಅಧಿಕಾರ ಯಾತ್ರೆ’ ಮಂಗಳವಾರ ನವಾಡಾಕ್ಕೆ ತಲುಪಿತ್ತು. ಈ ಯಾತ್ರೆಯು ಬಿಹಾರದ 20 ಜಿಲ್ಲೆಗಳನ್ನು ಒಳಗೊಂಡ 16 ದಿನಗಳ ಪ್ರವಾಸವಾಗಿದ್ದು, ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ರ‍್ಯಾಲಿಯಲ್ಲಿ ಭಾಗವಹಿಸಿದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ಬಿಹಾರದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಒಟ್ಟಾಗಿ ‘ಮತ ಕಳ್ಳತನ’ದಲ್ಲಿ ತೊಡಗಿವೆ. ನರೇಂದ್ರ ಮೋದಿ, ಅಮಿತ್ ಶಾ, ಮತ್ತು ಚುನಾವಣಾ ಆಯುಕ್ತರು ನಿಮ್ಮ ಮತಗಳನ್ನು ಕಸಿದುಕೊಳ್ಳುತ್ತಿದ್ದಾರೆ,” ಎಂದು ರಾಹುಲ್ ಗಾಂಧಿ ಆರೋಪಿಸಿದರು. ಜೊತೆಗೆ, ಮಹಾರಾಷ್ಟ್ರ, ಹರಿಯಾಣ, ಮತ್ತು ಮಧ್ಯಪ್ರದೇಶದ ಚುನಾವಣೆಗಳಲ್ಲಿ ಕೂಡ ವ್ಯವಸ್ಥಿತ ದಬ್ಬಾಳಿಕೆ ನಡೆದಿದೆ ಎಂದು ಆರೋಪಿಸಿದರು.

Exit mobile version