ಪಂಜಾಬ್‌ನಲ್ಲಿ ಭೀಕರ ಘಟನೆ: ವಿದ್ಯಾರ್ಥಿನಿಯ ಪ್ರಾಣ ತೆಗೆದು ತಾನೂ ಶೂಟ್ ಮಾಡಿಕೊಂಡ ವಿದ್ಯಾರ್ಥಿ

Untitled design 2026 02 09T161016.681

ಅಮೃತಸರ: ಪಂಜಾಬ್‌ನ ತರನ್ ತರಾನ್ ಜಿಲ್ಲೆಯ ಉಸ್ಮಾ ಗ್ರಾಮದ ಮಾಯ್ ಭಾಗೋ ಕಾನೂನು ಕಾಲೇಜಿನಲ್ಲಿ ಇಂದು ನಡೆದ ಆಘಾತಕಾರಿ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ತರಗತಿಯೊಳಗೆ ಗುಂಡಿಟ್ಟು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ವಿವರ:

ತರಗತಿ ನಡೆಯುತ್ತಿದ್ದ ವೇಳೆ ನಡೆದ ಈ ದುರಂತದಲ್ಲಿ ನೌಶೆಹ್ರಾ ಪನ್ನುವಾನ್ ಗ್ರಾಮದ ನಿವಾಸಿ ಸಂದೀಪ್ ಕೌರ್ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗುಂಡು ಹಾರಿಸಿದ ವಿದ್ಯಾರ್ಥಿಯನ್ನು ಮಲ್ಲಿಯನ್ ಗ್ರಾಮದ ಪ್ರಿನ್ಸ್ ರಾಜ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕಾನೂನು ವಿದ್ಯಾರ್ಥಿಗಳಾಗಿದ್ದು, ಒಂದೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ:

ಪೊಲೀಸರು ವಶಪಡಿಸಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಪ್ರಿನ್ಸ್ ರಾಜ್ ಮೊದಲೇ ಸಂಚು ರೂಪಿಸಿಕೊಂಡು ತರಗತಿಗೆ ಬಂದಿದ್ದ ಎಂಬುದು ಸ್ಪಷ್ಟವಾಗುತ್ತಿದೆ. ಬೆನ್ನಿಗೆ ಬ್ಯಾಗ್ ಹಾಕಿಕೊಂಡು ತರಗತಿಯೊಳಗೆ ಬಂದ ರಾಜ್, ಆರಂಭದಲ್ಲಿ ಸಹಜವಾಗಿಯೇ ಇದ್ದನು. ಆ ಸಮಯದಲ್ಲಿ ಸಂದೀಪ್ ಕೌರ್ ತನ್ನ ಇನ್ನೊಬ್ಬ ಗೆಳತಿಯೊಂದಿಗೆ ಮಾತನಾಡುತ್ತಿದ್ದಳು.

ಸ್ವಲ್ಪ ಸಮಯದ ನಂತರ ಮೂವರು ವಿದ್ಯಾರ್ಥಿಗಳು ತರಗತಿಯ ಹಿಂಭಾಗದ ಬೆಂಚ್‌ಗೆ ತೆರಳಿ ಮಾತುಕತೆ ನಡೆಸುತ್ತಿದ್ದರು. ಈ ಸಂಭಾಷಣೆಯ ನಡುವೆ ಇದ್ದಕ್ಕಿದ್ದಂತೆ ಪ್ರಿನ್ಸ್ ರಾಜ್ ತನ್ನ ಬ್ಯಾಗ್‌ನಿಂದ ಗನ್ ಹೊರತೆಗೆದು, ಸಂದೀಪ್ ಕೌರ್ ತಲೆಗೆ ಗುಂಡು ಹಾರಿಸಿದ್ದಾನೆ. ಆಕೆ ಕುಸಿದು ಬೀಳುತ್ತಿದ್ದಂತೆಯೇ, ಅದೇ ಗನ್‌ನಿಂದ ಪ್ರಿನ್ಸ್ ತನಗೂ ಗುಂಡು ಹಾರಿಸಿಕೊಂಡಿದ್ದಾನೆ. ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಈ ದೃಶ್ಯ ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ.

ಗುಂಡೇಟು ತಗುಲಿದ ಸಂದೀಪ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಪ್ರಿನ್ಸ್ ರಾಜ್‌ನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಇವರಿಬ್ಬರ ನಡುವೆ ಯಾವುದಾದರೂ ವೈಯಕ್ತಿಕ ದ್ವೇಷವಿತ್ತೇ ಅಥವಾ ಪ್ರೇಮ ಪ್ರಕರಣವೇ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ. ಕಾಲೇಜಿನೊಳಗೆ ಬಂದೂಕು ತರಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಪ್ರಶ್ನೆಗಳು ಎದ್ದಿವೆ.

Exit mobile version