ಪಂಜಾಬ್: ಪಂಜಾಬ್‌ನ ಜಲಂಧರ್ ನಗರದಲ್ಲಿ ಶುಕ್ರವಾರ ಹಗಲು ಹೊತ್ತಿನಲ್ಲೇ ಆಮ್ ಆದ್ಮಿ ಪಕ್ಷದ (AAP) ನಾಯಕ ಲಕ್ಕಿ ಒಬೆರಾಯ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.
ಜಲಂಧರ್‌ನ ಪ್ರತಿಷ್ಠಿತ ಮಾಡೆಲ್ ಟೌನ್ ಪ್ರದೇಶದಲ್ಲಿರುವ ಗುರುದ್ವಾರದ ಹೊರಭಾಗದಲ್ಲಿ ಈ ಭೀಕರ ಘಟನೆ ನಡೆದಿದೆ. ಲಕ್ಕಿ ಒಬೆರಾಯ್ ಅವರು ತಮ್ಮ ಕಾರನ್ನು ಗುರುದ್ವಾರದ ಬಳಿ ಪಾರ್ಕ್ ಮಾಡುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ಗುಂಡಿನ ಮಳೆಗರೆದಿದ್ದಾರೆ.
ಐದು ಗುಂಡುಗಳು ತಗುಲಿ ಗಂಭೀರ ಗಾಯ
ಪ್ರಾಥಮಿಕ ಮಾಹಿತಿ ಪ್ರಕಾರ, ಲಕ್ಕಿ ಒಬೆರಾಯ್ ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸಲಾಯಿತು. ಇದರಲ್ಲಿ ಕನಿಷ್ಠ ಐದು ಗುಂಡುಗಳು ಅವರ ದೇಹಕ್ಕೆ ತಗುಲಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ತನಿಖಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಸಾಕ್ಷಿಗಳ ವಿಚಾರಣೆ ಹಾಗೂ ಫಾರೆನ್ಸಿಕ್ ತಜ್ಞರ ಸಹಾಯದೊಂದಿಗೆ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಹಂತಕರ ಪತ್ತೆಗಾಗಿ ನಗರಾದ್ಯಂತ ತಪಾಸಣೆ ನಡೆಸಲಾಗುತ್ತಿದ್ದು, ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಕಿ ಒಬೆರಾಯ್ ಅವರು ಜಲಂಧರ್ ಪ್ರದೇಶದಲ್ಲಿ AAP ಪಕ್ಷದ ಸಕ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದರು. ಅವರ ಪತ್ನಿ ಈ ಹಿಂದೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಥಳೀಯ ಸಂಸ್ಥೆಗಳ (ಮುನ್ಸಿಪಲ್) ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಅವರು ಜಯಗಳಿಸಲು ಸಾಧ್ಯವಾಗಿರಲಿಲ್ಲ.
ಘಟನೆಯ ಬಳಿಕ ಜಲಂಧರ್ ನಗರದಲ್ಲಿ ಭೀತಿ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಗುರುದ್ವಾರದಂತಹ ಪವಿತ್ರ ಸ್ಥಳದ ಸಮೀಪವೇ ಈ ರೀತಿಯ ಹತ್ಯೆ ನಡೆದಿರುವುದು ಸಾರ್ವಜನಿಕರನ್ನು ಇನ್ನಷ್ಟು ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
