ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 9 ಮಂದಿ ದುರ್ಮ*ರಣ

Untitled design 2026 06 06T122813.077

ಪಂಜಾಬ್ : ಪಂಜಾಬ್ ರಾಜ್ಯದ ಫಿರೋಜ್‌ಪುರ ಜಿಲ್ಲೆಯಲ್ಲಿ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ 9 ಮಂದಿ ದುರ್ಮರಣ ಹೊಂದಿದ್ದಾರೆ. ಪಿಕಪ್ ಟ್ರಕ್ ಮತ್ತು ಟ್ರೈಲರ್ ನಡುವೆ ನಡೆದ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸ್ಥಳದಲ್ಲೇ ನಾಲ್ವರು ಪ್ರಾಣಬಿಟ್ಟಿದ್ದು, ಉಳಿದ ಐವರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. 

ಘಟನೆ ಫಿರೋಜ್‌ಪುರ–ಫಾಜಿಲ್ಕಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಸಂಭವಿಸಿದ್ದು, ಸುಮಾರು 28 ಪ್ರಯಾಣಿಕರನ್ನು ಹೊತ್ತ ಪಿಕಪ್ ವಾಹನವು ವೇಗವಾಗಿ ಸಾಗುತ್ತಿದ್ದ ವೇಲೆ ಎದುರಿಗೆ ಬಂದ ಟ್ರೈಲರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಾಹನದ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಹಲವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ, ಮೃತಪಟ್ಟವರು ಜಲಾಲಾಬಾದ್ ಪ್ರದೇಶದ ಒಂದೇ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಸಂಬಂಧಿಕರಾಗಿದ್ದಾರೆ. ಕುಟುಂಬದ ಹಿರಿಯ ಮಹಿಳೆಯೊಬ್ಬರ ಅಂತ್ಯಕ್ರಿಯೆ ಮತ್ತು ಸಂಬಂಧಿತ ವಿಧಿವಿಧಾನಗಳನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸ್ಥಳದಲ್ಲೇ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ್ದು, ಉಳಿದ ಐವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಥವಾ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಅಪಘಾತದ ನಂತರ, ವಾಹನದ ಅವಶೇಷಗಳ ನಡುವೆ ಸಿಲುಕಿದ ಗಾಯಾಳುಗಳನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಣೆ ಮಾಡಿದರು.

ಘಟನೆ ತಿಳಿದ ತಕ್ಷಣ ಸ್ಥಳೀಯ ಪೊಲೀಸ್ ತಂಡಗಳು ಹಾಗೂ ಹಿರಿಯ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಗಾಯಾಳುಗಳನ್ನು ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಫರಿದ್ಕೋಟ್‌ನ ವಿಶೇಷ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version