ಚಂಡೀಗಢ: ಪಂಜಾಬ್‌ನಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಹೋರಾಟಗಾರನೊಬ್ಬನನ್ನು ಮೆಡಿಕಲ್ ಶಾಪ್ ಮಾಲೀಕ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಾನ್ಸಾದಲ್ಲಿ ನಡೆದ ಈ ಭೀಕರ ಘಟನೆ ಫೇಸ್‌ಬುಕ್ ಲೈವ್‌ನಲ್ಲಿ ಸೆರೆಯಾಗಿದೆ.
ಲೈವ್ ಮಾಡುತ್ತಿದ್ದಾಗಲೇ ಗುಂಡಿನ ದಾಳಿ
ಪಂಜಾಬ್‌ನ ಮಾನ್ಸಾ ಪ್ರದೇಶದಲ್ಲಿ ಪರ್ವಿಂದರ್ ಸಿಂಗ್ ಝೋಟಾ ಅವರು ಮೆಡಿಕಲ್ ಸ್ಟೋರ್‌ಗಳಲ್ಲಿ ಮಾದಕ ಪರಿಣಾಮ ಬೀರುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಈ ಹಿನ್ನೆಲೆ ಮಂಗಳವಾರ ಅವರು ಮಾನ್ಸಾದಲ್ಲಿರುವ ಮೆಡಿಕಲ್ ಶಾಪ್ ಒಂದರ ಮುಂದೆ ನಿಂತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನೇರಪ್ರಸಾರ ಆರಂಭಿಸಿದ್ದರು.
ಸುಮಾರು ಐದು ನಿಮಿಷಗಳ ಈ ವಿಡಿಯೋದಲ್ಲಿ, ಝೋಟಾ ಅವರೊಂದಿಗೆ ವೃದ್ಧರೊಬ್ಬರು ಕಾಣಿಸಿಕೊಂಡಿದ್ದಾರೆ. ಈ ಮೆಡಿಕಲ್ ಶಾಪ್‌ನಿಂದಲೇ ಮಾದಕ ಔಷಧಿಗಳನ್ನು ಖರೀದಿಸಿರುವುದಾಗಿ ವೃದ್ಧರು ಆರೋಪಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಝೋಟಾ ಮತ್ತು ಅಂಗಡಿ ಮಾಲೀಕನ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
‘ತಾಕತ್ತಿದ್ದರೆ ನನ್ನನ್ನು ಕೊಲ್ಲು’ ಎಂದಿದ್ದ ಝೋಟಾ
ವಾಗ್ವಾದದ ಸಂದರ್ಭದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಕೈಯಲ್ಲಿ ಪಿಸ್ತೂಲ್ ಇರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದನ್ನು ಪ್ರಶ್ನಿಸಿದ ಝೋಟಾ, ಕೈಯಲ್ಲಿ ಪಿಸ್ತೂಲ್ ಏಕೆ ಇಟ್ಟುಕೊಂಡಿದ್ದೀಯಾ ಎಂದು ಕೇಳಿ, “ತಾಕತ್ತಿದ್ದರೆ ನನ್ನನ್ನು ಕೊಲ್ಲು” ಎಂದು ಸವಾಲು ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವಂತೆ ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ಕರೆ ಮಾಡುವಂತೆ ತಮ್ಮ ಬೆಂಬಲಿಗರಿಗೂ ಸೂಚಿಸಿದ್ದಾರೆ. ಮಾದಕ ಔಷಧಿಗಳ ಅಕ್ರಮ ಮಾರಾಟದ ಆರೋಪದ ಕುರಿತು ನಡೆಯುತ್ತಿದ್ದ ಈ ವಾಗ್ವಾದ ಕ್ರಮೇಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸುಮಾರು ನಾಲ್ಕು ನಿಮಿಷಗಳ ಮಾತಿನ ಚಕಮಕಿ ಬಳಿಕ, ಅಂಗಡಿ ಮಾಲೀಕ ಏಕಾಏಕಿ ಝೋಟಾ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಗುಂಡೇಟು ತಗುಲುತ್ತಿದ್ದಂತೆ ಮೊಬೈಲ್ ಫೋನ್ ಕೆಳಗೆ ಬಿದ್ದಿದ್ದು, ಫೇಸ್‌ಬುಕ್ ಲೈವ್ ಸ್ಥಗಿತಗೊಂಡಿದೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮಾದಕ ದ್ರವ್ಯಗಳ ವಿರುದ್ಧ ಹಲವು ವರ್ಷಗಳ ಹೋರಾಟ
ಪರ್ವಿಂದರ್ ಸಿಂಗ್ ಝೋಟಾ ಅವರು ಫೇಸ್‌ಬುಕ್‌ನಲ್ಲಿ 24,000ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಮಾನ್ಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ದ್ರವ್ಯಗಳ ಬಳಕೆ ಹಾಗೂ ಅಕ್ರಮ ಮಾರಾಟದ ವಿರುದ್ಧ ಹಲವು ವರ್ಷಗಳಿಂದ ಅಭಿಯಾನ ನಡೆಸುತ್ತಿದ್ದರು. ಮೆಡಿಕಲ್ ಸ್ಟೋರ್‌ಗಳ ಮೂಲಕ ಮಾದಕ ಪರಿಣಾಮ ಬೀರುವ ಔಷಧಿಗಳ ಮಾರಾಟ ನಡೆಯುತ್ತಿದೆ ಎಂಬ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸುವ ಮೂಲಕ ಗಮನ ಸೆಳೆದಿದ್ದರು.
ಆದರೆ, ಅವರ ಹೋರಾಟದ ಹಾದಿಯಲ್ಲೂ ವಿವಾದಗಳು ಎದುರಾಗಿದ್ದವು. 2023ರ ಜುಲೈನಲ್ಲಿ ಮೆಡಿಕಲ್ ಸ್ಟೋರ್‌ವೊಂದಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ಅವರ ವಿರುದ್ಧ ಗಲಭೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರು ಸುಮಾರು ಎರಡು ತಿಂಗಳ ಜೈಲುವಾಸದ ಬಳಿಕ ಬಿಡುಗಡೆಯಾಗಿದ್ದರು. ನಂತರವೂ ಮಾದಕ ದ್ರವ್ಯಗಳ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದರು.
