ಪತಿಯ ಜೀವವನ್ನು ಉಳಿಸಲು ತನ್ನ ಯಕೃತ್ತನ್ನು ದಾನ ಮಾಡಿದ ಪತ್ನಿಯೊಬ್ಬಳು, ಶಸ್ತ್ರಚಿಕಿತ್ಸೆಯ ನಂತರ ತಾನೂ ಜೀವ ಕಳೆದುಕೊಂಡ ದಾರುಣ ಘಟನೆ ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತರನ್ನು ಬಾಪು ಕೊಮ್ಕರ್ ಮತ್ತು ಅವರ ಪತ್ನಿ ಕಾಮಿನಿ ಕೊಮ್ಕರ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯದ ಹೀಗಾಗಿದೆ ಎಂದು ಕುಟುಂಬದವರು ಆರೋಪಿಸಿದ್ದು, ಮಹಾರಾಷ್ಟ್ರ ಆರೋಗ್ಯ ಇಲಾಖೆಯಿಂದ ಆಸ್ಪತ್ರೆಯ ತನಿಖೆಗೆ ಆದೇಶವಾಗಿದೆ.
ಬಾಪು ಕೊಮ್ಕರ್ ಅವರು ಗಂಭೀರವಾದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಪತ್ನಿ ಕಾಮಿನಿ ಕೊಮ್ಕರ್ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದ್ದರು. ಆಗಸ್ಟ್ 15ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಈ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಬಾಪು ಕೊಮ್ಕರ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ಆಗಸ್ಟ್ 17ರಂದು ಅವರು ಕೊನೆಯುಸಿರೆಳೆದರು.
ಕಾಮಿನಿ ಕೊಮ್ಕರ್ ಆರಂಭದಲ್ಲಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೂ, ಆಗಸ್ಟ್ 21ರಂದು ತೀವ್ರವಾದ ಸೋಂಕಿನಿಂದ (ಸೆಪ್ಟಿಕ್) ಮತ್ತು ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು.
ಈ ಘಟನೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ. ನಾಗನಾಥ್ ಯೆಂಪಲ್ಲೆ ಅವರು ಸಹ್ಯಾದ್ರಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆಯ ಸಂಪೂರ್ಣ ವಿವರಗಳು, ದಾನಿಯ ಮತ್ತು ಸ್ವೀಕರಿಸುವವರ ಮಾಹಿತಿ, ವೀಡಿಯೊ ರೆಕಾರ್ಡಿಂಗ್‌ಗಳು, ಮತ್ತು ಚಿಕಿತ್ಸೆಯ ಮಾರ್ಗಸೂಚಿಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಕುಟುಂಬದ ಸದಸ್ಯರು ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದು, ಈ ಘಟನೆಯ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಬಗ್ಗೆ ತೀವ್ರ ಚರ್ಚೆ ನಡೆದಿದ್ದು, ವೈದ್ಯಕೀಯ ಶಿಷ್ಟಾಚಾರದ ಕೊರತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.