ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪುಣೆಯ ಐಸಿಸ್ (ISIS) ಮಾಡ್ಯೂಲ್ ಪ್ರಕರಣದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಲಿಯಾಕತ್ ಖಾನ್ ಎಂಬ ಆರೋಪಿಗಳನ್ನು ಇಂಡೋನೇಷ್ಯಾದಲ್ಲಿ ಬಂಧಿಸಿ, ಭಾರತಕ್ಕೆ ಕರೆತರಲಾಗಿದೆ. ಮುಂಬೈನಲ್ಲಿ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು, ಶೀಘ್ರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಎನ್‌ಐಎ ಪ್ರಕಾರ, ಆರೋಪಿಗಳು ಮಹಾರಾಷ್ಟ್ರ, ಗುಜರಾತ್, ಮತ್ತು ಭಾರತದ ಇತರ ಭಾಗಗಳಲ್ಲಿ ಐಸಿಸ್ ಪ್ರಾಯೋಜಿತ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದರು. ಇವರು ಐಇಡಿ (ಸುಧಾರಿತ ಸ್ಫೋಟಕ ಸಾಧನ) ತಯಾರಿಕೆಗಾಗಿ ಕಾರ್ಯಾಗಾರಗಳನ್ನು ಆಯೋಜಿಸುವುದು, ಗುಂಡು ಹಾರಿಸುವ ತರಬೇತಿಗೆ ಸ್ಥಳಗಳನ್ನು ಗುರುತಿಸುವುದು, ಕಾಡುಗಳಲ್ಲಿ ಅಡಗಿಕೊಳ್ಳುವುದು, ಹಾಗೂ ಸಶಸ್ತ್ರ ದರೋಡೆ ಮತ್ತು ಕಳ್ಳತನದ ಮೂಲಕ ಹಣ ಸಂಗ್ರಹಿಸುವಂತಹ ಚಟುವಟಿಕೆಗಳಲ್ಲಿ ತೊಡಗಿದ್ದರು.
ಅಬ್ದುಲ್ಲಾ ಫಯಾಜ್ ಶೇಖ್, ಅಲಿಯಾಸ್ ‘ದಿಯಾಪರ್‌ವಾಲಾ’, ಪುಣೆಯ ಕೊಂಡವದದ ಮಿತಾನಗರದ ನಿವಾಸಿಯಾಗಿದ್ದರೆ, ತಲ್ಹಾ ಲಿಯಾಕತ್ ಖಾನ್ ಪುಣೆಯ ವನ್ವಾಡಿಯಲ್ಲಿ ವಾಸವಾಗಿದ್ದ. ಇಬ್ಬರೂ ಸ್ವಲ್ಪ ಕಾಲದಿಂದ ತಲೆಮರೆಸಿಕೊಂಡಿದ್ದರು. ಇವರ ಬಂಧನಕ್ಕಾಗಿ ಎನ್‌ಐಎ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಈ ಬಂಧನವು ತನಿಖೆಯಲ್ಲಿ ಪ್ರಮುಖ ಮೈಲಿಗಲ್ಲೆಂದು ಎನ್‌ಐಎ ಪರಿಗಣಿಸಿದೆ.
