ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಬಾಹುಬಲಿ ಸಿನಿಮಾ ಸ್ಟೈಲ್‌ನಲ್ಲಿ ಮಗುವನ್ನು ರಕ್ಷಿಸಿದ ತಂದೆ

222 (20)

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದ ನಡುವೆ ಒಬ್ಬ ತಂದೆ ತನ್ನ ಕುಟುಂಬವನ್ನು ರಕ್ಷಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಯ ವಿಡಿಯೊ ಬಾಹುಬಲಿ ಚಿತ್ರದ ಒಂದು ದೃಶ್ಯವನ್ನು ನೆನಪಿಸುವಂತಿದೆ. ಅಲ್ಲಿ ಶಿವಗಾಮಿ (ರಮ್ಯಾ ಕೃಷ್ಣಾ) ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು ನದಿಯನ್ನು ದಾಟುವ ದೃಶ್ಯವಿದೆ. ಇದೇ ರೀತಿಯಾಗಿ, ಇಲ್ಲಿ ತಂದೆಯೊಬ್ಬ ತನ್ನ ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು ಜಲಾವೃತವಾದ ರಸ್ತೆಯನ್ನು ದಾಟಿದ್ದಾನೆ.

ಉತ್ತರ ಪ್ರದೇಶದಲ್ಲಿ ಈ ವರ್ಷ ಭಾರೀ ಮಳೆಯಿಂದಾಗಿ ಗಂಗಾ ಮತ್ತು ಯಮುನಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರಯಾಗ್‌ರಾಜ್‌ನ ಛೋಟಾ ಬಘರ ಪ್ರದೇಶದಲ್ಲಿ ಶನಿವಾರ (ಆಗಸ್ಟ್ 2, 2025) ರಾತ್ರಿ ಭಾರೀ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಗಳ ಒಳಗೆ ನೀರು ನುಗ್ಗಿದ್ದರಿಂದ ಜನರು ತಮ್ಮ ವಸ್ತುಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು.

ಈ ಸಂದರ್ಭದಲ್ಲಿ, ಛೋಟಾ ಬಘರಾದಲ್ಲಿ ನಡೆದ ಒಂದು ಘಟನೆ ಎಲ್ಲರ ಗಮನ ಸೆಳೆದಿದೆ. ಪ್ರವಾಹದ ನಡುವೆ ಸಿಲುಕಿದ್ದ ನವಜಾತ ಶಿಶು ಮತ್ತು ಅದರ ತಾಯಿಯನ್ನು ರಕ್ಷಿಸಲು ಕುಟುಂಬವೊಂದು ಶ್ರಮಿಸಿತ್ತು. ಯಾವುದೇ ತುರ್ತು ಸಹಾಯ ಲಭ್ಯವಿರದ ಸಂದರ್ಭದಲ್ಲಿ, ತಂದೆಯೊಬ್ಬ ತನ್ನ ಮಗುವನ್ನು ಕೈಯಲ್ಲಿ ಹಿಡಿದು ತಲೆಯ ಮೇಲೆ ಹೊತ್ತುಕೊಂಡು ಸೊಂಟದ ಆಳದ ನೀರಿನಲ್ಲಿ ಎಚ್ಚರಿಕೆಯಿಂದ ಸಾಗಿದ. ಇದೇ ವೇಳೆ, ಕುಟುಂಬದ ಇನ್ನೊಬ್ಬ ಸದಸ್ಯ ತಾಯಿಯನ್ನು ಬೆನ್ನ ಹಿಂದೆ ನಡೆದುಕೊಂಡು ಸಾಗಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದ. ಈ ದೃಶ್ಯವನ್ನು ಯಾರೋ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಅದು ವೈರಲ್ ಆಗಿದೆ.

ಪ್ರಯಾಗ್‌ರಾಜ್‌ನಲ್ಲಿ ಪ್ರವಾಹ ಪರಿಸ್ಥಿತಿ ದಿನೇ ದಿನೇ ಹೆಚ್ಚುತ್ತಾ ಇದೆ. ಶನಿವಾರ ಸಂಜೆಯ ಹೊತ್ತಿಗೆ, ಗಂಗಾ ಮತ್ತು ಯಮುನಾ ನದಿಗಳ ನೀರಿನ ಮಟ್ಟವು 84.734 ಮೀಟರ್‌ಗಿಂತಲೂ ಹೆಚ್ಚಾಗಿ, ಅಪಾಯದ ಮಟ್ಟವನ್ನು ಮೀರಿತ್ತು. ಇದರಿಂದ ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿವೆ. ಸುಮಾರು 3,000 ಜನರು ಸ್ಥಳಾಂತರಗೊಂಡು, ಜಿಲ್ಲಾಡಳಿತವು ಸ್ಥಾಪಿಸಿರುವ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

Exit mobile version