ವಂದೇ ಮಾತರಂ ಗೀತೆ ಬ್ರಿಟಿಷರ ಎದುರು ಬಂಡೆಯಂತೆ ನಿಂತಿತ್ತು: ಪ್ರಧಾನಿ ಮೋದಿ ಭಾವುಕ ಭಾಷಣ!

Website (8)

“ವಂದೇ ಮಾತರಂ ಗೀತೆಯು ಬ್ರಿಟಿಷರ ಎದುರು ಬಂಡೆಯಂತೆ ನಿಂತಿತ್ತು. ಅದು ಸ್ವಾತಂತ್ರ್ಯ ಹೋರಾಟದ ಯುದ್ಧಘೋಷವಾಗಿತ್ತು, ಬಲಿದಾನದ ಮಂತ್ರವಾಗಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಭಾವುಕವಾಗಿ ನುಡಿದರು. ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೋಮವಾರ ಲೋಕಸಭೆಯಲ್ಲಿ ಆರಂಭವಾದ ವಿಶೇಷ ಚರ್ಚೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

“1857ರ ಮಹಾಸಂಗ್ರಾಮದ ನಂತರ ಬ್ರಿಟಿಷರು ಭಾರತೀಯರನ್ನು ದುರ್ಬಲಗೊಳಿಸಲು ಎಲ್ಲ ಪ್ರಯತ್ನ ಮಾಡಿದ್ದರು. ಭಾರತೀಯರ ಮೇಲೆ ‘ಗಾಡ್ ಸೇವ್ ದಿ ಕ್ವೀನ್’ ಹಾಡನ್ನು ಒತ್ತಾಯಪೂರ್ವಕವಾಗಿ ಹಾಡಿಸುತ್ತಿದ್ದರು. ಆ ಸಮಯದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ಇಟ್ಟಿಗೆಗೆ ಕಲ್ಲಿನಿಂದ ಉತ್ತರ ನೀಡಿದರು. ವಂದೇ ಮಾತರಂ ಜನಿಸಿತು” ಎಂದು ಪ್ರಧಾನಿ ವಿವರಿಸಿದರು.

ವಂದೇ ಮಾತರಂ ಗೀತೆಯ 50ನೇ ವಾರ್ಷಿಕೋತ್ಸವದ ಸಮಯದಲ್ಲಿ ದೇಶ ಗುಲಾಮಗಿರಿಯ ಸಂಕೋಲೆಯಲ್ಲಿತ್ತು. 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶ ತುರ್ತುಪರಿಸ್ಥಿತಿಯ ಸಂಕೋಲೆಯಲ್ಲಿತ್ತು. ಆದರೆ 150ನೇ ವಾರ್ಷಿಕೋತ್ಸವವನ್ನು ಸ್ವತಂತ್ರ, ಸಂವಿಧಾನ ಬದ್ಧ ಭಾರತದಲ್ಲಿ ಆಚರಿಸುತ್ತಿರುವುದು ನಮ್ಮೆಲ್ಲರ ಅದೃಷ್ಟ ಎಂದು ಪ್ರಧಾನಿ ಭಾವುಕರಾದರು.

ಬಾರಿಸಾಲ್ ಮೆರವಣಿಗೆಯಿಂದ ರಂಗಪುರದ ದಂಡದವರೆಗೆ

“ವಂದೇ ಮಾತರಂ ಕೇವಲ ರಾಜಕೀಯ ಸ್ವಾತಂತ್ರ್ಯದ ಮಂತ್ರವಲ್ಲ, ಅದು ಭಾರತಮಾತೆಯನ್ನು ವಸಾಹತುಶಾಹಿ ಕುರುಹುಗಳಿಂದ ಮುಕ್ತಗೊಳಿಸುವ ಪವಿತ್ರ ಯುದ್ಧಘೋಷವಾಗಿತ್ತು” ಎಂದು ಪ್ರಧಾನಿ ಗೌರವ ಸೂಚಿಸಿದರು.

ಜಗತ್ತಿನ ಇತಿಹಾಸದಲ್ಲಿ ವಂದೇ ಮಾತರಂ ಗೀತೆಯಷ್ಟು ಭಾವನಾತ್ಮಕ, ಪ್ರೇರಣಾದಾಯಿ ಹಾಡು ಬೇರೆ ಇಲ್ಲ ಎಂದು ಪ್ರಧಾನಿ ಹೇಳಿದರು. “ನಾವು ಇದನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ಮುಂದಿನ ಪೀಳಿಗೆಗೆ ದೊಡ್ಡ ಸ್ಫೂರ್ತಿಯಾಗಲಿದೆ” ಎಂದು ಕರೆ ನೀಡಿದರು.

Exit mobile version