ಅಯೋಧ್ಯೆ (ಉ.ಪ್ರ): ಶ್ರೀರಾಮನ ನಾಡು ಅಯೋಧ್ಯೆಯಲ್ಲಿ ಇಂದು ಇತಿಹಾಸಿಕ ಕ್ಷಣಕ್ಕೆ ಸಿದ್ದವಾಗಿದೆ. ರಾಮಮಂದಿರದಲ್ಲಿ ನಡೆಯಲಿರುವ ಭಗವಾಧ್ವಜಾರೋಹಣ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಶೇಷಾವತಾರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ.
ರಾಮಮಂದಿರ ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ, ಮೊದಲಿಗೆ ರಾಮಪಥದ ಮೂಲಕ ವಾಹನ ಮೆರವಣಿಗೆಯಲ್ಲಿ ಸೇರಿಕೊಂಡು ಭವ್ಯ ರೋಡ್ ಶೋ ನಡೆಸಿದರು. ರೋಡ್ ಶೋ ವೇಳೆ ಮೋದಿ ವಾಹನ ಸಂಚರಿಸುತ್ತಿದ್ದಂತೆ, ಜನರು ಹೂವುಗಳ ಮಳೆ ಸುರಿಸಿ ಸ್ವಾಗತಿಸಿದರು. “ಜೈ ಶ್ರೀರಾಮ” ಘೋಷಣೆ ಕೂಗುತ್ತಿದ್ದರು.
ಧ್ವಜಾರೋಹಣಕ್ಕೂ ಮುನ್ನ ಶೇಷಾವತಾರ ಮಂದಿರಕ್ಕೆ ತೆರಳಿದ ಪ್ರಧಾನಿ ಮೋದಿ, ಅಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ಮಂದಿರದ ಅರ್ಚಕರು ಪರಂಪರೆಯ ವಿಧಿವಿಧಾನಗಳ ಮೂಲಕ ಪ್ರಧಾನಿಗೆ ಪೂಜೆಯ ನೈವೇದ್ಯ ಸಲ್ಲಿಸಿದರು. ನಂತರ ಮೋದಿ ಪುರೋಹಿತರೊಂದಿಗೆ ಚರ್ಚಿಸಿ, ಧ್ವಜಾರೋಹಣದ ಶುಭ ಕಾರ್ಯಕ್ಕೆ ಅಗತ್ಯವಾದ ಸಂಸ್ಕಾರಗಳನ್ನು ಪೂರ್ಣಗೊಳಿಸಿದರು.
ದೇವಸ್ಥಾನದ ಗೋಪುರದ ಮೇಲೆ 10 ಅಡಿ ಎತ್ತರದ ಪವಿತ್ರ ಕೇಸರಿ ಧ್ವಜವನ್ನು ಅಳವಡಿಸಲಾಗಿದೆ. ಬೆಳಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆವರೆಗೆ ಇರುವ ಶುಭ ಮುಹೂರ್ತದಲ್ಲಿ ಈ ಧ್ವಜಾರೋಹಣ ನೆರವೇರಿಸಲಿದ್ದು, ಅದನ್ನು ಸ್ವತಃ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಕೇಸರಿ ಧ್ವಜ ಪ್ರತಿಷ್ಠಾಪನೆ
ಅಯೋಧ್ಯೆಯ ಪವಿತ್ರ ಭೂಮಿಯು ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಿದ್ಧವಾಗಿದೆ. ವರ್ಷಗಳ ಕಾಲ ನಿರೀಕ್ಷಿತವಾಗಿದ್ದ ರಾಮಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ, ಶಿಖರದ ಮೇಲೆ ಧರ್ಮ ಧ್ವಜಾರೋಹಣಕ್ಕೆ ಶುಭ ಮುಹೂರ್ತ ನಿಗದಿಯಾಗಿದೆ. ಈ ಐತಿಹಾಸಿಕ ಧರ್ಮ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ.
ಇಂದು ಬೆಳಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶುಭ ಮುಹೂರ್ತ ನಿಗದಿಯಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಭಗವಾಧ್ವಜವನ್ನು ಶಿಖರದ ಮೇಲೆ ಹಾರಿಸಲಿದ್ದಾರೆ. ರಾಮಮಂದಿರದ ಮೇಲ್ಭಾಗದಲ್ಲಿ ಹಾರಲಿರುವ 10 ಅಡಿ ಎತ್ತರದ ಭಗವಾಧ್ವಜ ಧಾರ್ಮಿಕವಾಗಿ ಅಪಾರ ಮಹತ್ವವನ್ನು ಹೊಂದಿದೆ.
ಇಂದಿನ ದಿನಾಂಕಕ್ಕೆ ವಿಶೇಷವಾದ ಆಧ್ಯಾತ್ಮಿಕ ಮಹತ್ವವೂ ಇದೆ. ಇಂದು ಮಾರ್ಗಶಿರ ಶುಕ್ಲ ಪಂಚಮಿ ತಿಥಿ. ಪುರಾಣಗಳ ಪ್ರಕಾರ ಇದೇ ದಿನ ಶ್ರೀರಾಮ ಹಾಗೂ ಸೀತೆ ಜೊತೆ ದೈವಿಕ ವಿವಾಹ ನಡೆದಿದ್ದು, ಭಗವಂತನ ಜೀವನದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ.
ಭಾರತದ ಇತಿಹಾಸದಲ್ಲಿ ಮಹಾನ ವ್ಯಕ್ತಿಗಳಲ್ಲಿ ಒಬ್ಬರಾದ ಸಿಖ್ ಗುರು ತೇಗ್ ಬಹದ್ದೂರ್ ಅವರ ಬಲಿದಾನದ ದಿನವೂ ಇದೇ. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಈ ಮಹಾನ್ ಗುರುಗಳು ಅಯೋಧ್ಯೆಯಲ್ಲೇ 48 ಗಂಟೆಗಳ ಕಾಲ ನಿರಂತರ ತಪಸ್ಸು ನಡೆಸಿದ್ದರೆಂಬ ಉಲ್ಲೇಖವಿದೆ.
ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಾದ್ಯಂತ ವಿಶೇಷ ಸಿದ್ಧತೆ ನಡೆದಿದೆ. ದೇಗುಲದ ಶಿಖರದ ಮೇಲೆ ಹಾರಲಿರುವ ಭಗವಾಧ್ವಜವು ಕೇಸರಿಯ ಬಣ್ಣದಲ್ಲಿ ಆಕರ್ಷಕವಾಗಿ ತಯಾರಾಗಿದ್ದು, ರಾಮನ ನಾಮ ಮತ್ತು ಧಾರ್ಮಿಕ ಚಿಹ್ನೆಗಳೊಂದಿಗೆ ಅಲಂಕರಿಸಲಾಗಿದೆ. ದೇಗುಲದ ಯಜಮಾನರು ಮತ್ತು ವೇದಪಂಡಿತರು ವಿಶೇಷ ಮಂತ್ರೋಚ್ಚಾರಣೆಗಳೊಂದಿಗೆ ಈ ಕಾರ್ಯವನ್ನು ನೆರವೇರಿಸಲಿದ್ದಾರೆ.
ಭಗವಾನ ರಾಮನ ದೇಗುಲದಲ್ಲಿ ಇಂತಹ ದೈವಿಕ ದೃಶ್ಯ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಆಗಮಿಸಿದ್ದು, ದೀಪಾಲಂಕಾರ, ಧಾರ್ಮಿಕ ಗಾನ, ಭಜನೆ, ಮಂಗಲ ವಾದ್ಯಗಳ ನಾದ ಇವೆಲ್ಲವು ಅಯೋಧ್ಯೆಯ ಈ ಕಾರ್ಯಕ್ರಮಕ್ಕೆ ಮೆರಗು ತಂದಿದೆ.
